(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ20. ಕರ್ನಾಟಕದಲ್ಲಿ ಹಠಾತ್ ದಡಾರ ಕಾಯಿಲೆ ಏರಿಕೆಗೊಂಡಿದ್ದು, ರಾಜ್ಯದಲ್ಲಿ 2021ರಲ್ಲಿ 10 ಲಕ್ಷ ಜನರಲ್ಲಿ ಶೇ 4.8 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂಕಿ ಅಂಶಗಳಲ್ಲಿ ವರದಿಯಾಗಿದೆ.
ರಾಜ್ಯದ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕು ಕೇಂದ್ರದಲ್ಲಿ ನೂರಾರು ಮಕ್ಕಳಲ್ಲಿ ದಡಾರ ಕಾಯಿಲೆ ಕಾಣಿಸಿಕೊಂಡಿದ್ದು, ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದೆ. 2022ರಲ್ಲಿ 10 ಲಕ್ಷ ಜನರಲ್ಲಿ ಶೇ 8.52ರಷ್ಟು ಜನರಿಗೆ ದಡಾರ ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ರೋಗ ನಿಯಂತ್ರಣಕ್ಕೆ ಮತ್ತು 2023ರ ಅಂತ್ಯದ ವೇಳಗೆ ದಡಾರ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಆರೋಗ್ಯ ಇಲಾಖೆ ಭಾರೀ ಕ್ರಮ ಕೈಗೊಳ್ಳುತ್ತಿದೆ.
2021ರಲ್ಲಿ ದೇಶದ 10 ಲಕ್ಷ ಜನರಲ್ಲಿ ಶೇ 4.6 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿತ್ತು. ಇದು 2022ರಲ್ಲಿ ಏರಿಕೆಯಾಗಿದ್ದು, ಶೇ 22.36 ರಷ್ಟು ಜನರಿಗೆ ರೋಗ ಹೆಚ್ಚಳಗೊಂಡಿದೆ ಎಂದು ಕೇಂದ್ರ ಸರ್ಕಾರ ಅಂಕಿ ಅಂಶಗಳಲ್ಲಿ ವರದಿಯಾಗಿದೆ. ಪ್ರಪಂಚದ 10 ದೇಶಗಳಲ್ಲಿ ದಡಾರ ರೋಗ ಉಲ್ಭಣಗೊಂಡಿದ್ದು , ಈ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸೇರಿದ್ದು, ಭಾರತೀಯರಿಗೆ ಮತ್ತೊಂದು ಶಾಕಿಂಗ್ ಎದುರಾಗಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ವರದಿ ಮೂಲಕ ತಿಳಿಯಲಾಗಿದೆ. ಕಳೆದ ವರ್ಷ ಡಿಸೆಂಬರ್ 17 ರಂದು ನಡೆದ ಸಂಸತ್ ಅಧಿವೇಶನಕ್ಕೆ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 10,416 ದಡಾರ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 40 ಜನ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿದೆ.
ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕು ಆಗಿದೆ. ಸೋಂಕು ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು.
ದಡಾರ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಂಕಿತ ಮಗುವಿನಲ್ಲಿ 2 ರಿಂದ 3 ದಿನಗಳ ನಂತರ, ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಬೆಳೆಯುತ್ತವೆ . ಕೆಂಪು-ಫ್ಲಾಟ್ ರಾಶ್ 3 ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರ ರಾಶಸ್ ಉಂಟಾಗುತ್ತದೆ.
ದಡಾರ ಕಾಯಿಲೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕುವುದು. ದಡಾರದಿಂದ ಮಕ್ಕಳನ್ನು ರಕ್ಷಿಸಲು, ಅವರಿಗೆ 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಏಕೆಂದರೆ ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹಾಗಾಗಿ ದಡಾರ ಸಂಭವಿಸಿದ ನಂತರ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯ.