(ನ್ಯೂಸ್ ಕಡಬ) newskadaba.com.ಬೆಳಗಾವಿ. ಮಾ20. ಇದೇ ತಿಂಗಳ ಆರಂಭದಲ್ಲಿ ಕಾರ್ಯಾಚರಣೆ ವೇಳೆಯಲ್ಲಿ ವಶಕ್ಕೆ ಪಡೆಯಲಾದ ಮದ್ಯದ ಬಾಟಲಿಗಳನ್ನು ನಿಗೂಢವಾಗಿ ಸಾಗಿಸಿರುವುದು ಇಲಾಖಾ ತನಿಖೆ ವೇಳೆ ತಿಳಿದುಬಂದ ನಂತರ ಮೂವರು ಶ್ರೇಣಿ ಅಧಿಕಾರಿಗಳು ಸೇರಿದಂತೆ ಐವರು ಅಬಕಾರಿ ಸಿಬ್ಬಂದಿಯನ್ನು ಅಮಾನುತು ಮಾಡಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಅಕ್ರಮ ಹಣ ಹಾಗೂ ಮಧ್ಯ ಸಾಗಾಟವನ್ನು ತಡೆಯಲು ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಮಾರ್ಚ್ 7 ರ ಸಂಜೆ ಖಾನಪುರ ತಾಲೂಕಿನ ಮೊಡೆಕೊಪ್ಪ ಬಳಿ ಸುಮಾರು 47 ಲಕ್ಷ ರೂ. ಮೊತ್ತದ 753 ವಿದೇಶಿ ಮದ್ಯದ ಪೆಟ್ಟಿಗೆ ಸಾಗಿಸುತ್ತಿದ್ದ ವಾಹನವೊಂದನ್ನು ಅಬಕಾರಿ ಇಲಾಖೆ ವಿಚಕ್ಷಣಾ ದಳ ವಶಕ್ಕೆ ಪಡೆದಿತ್ತು.
ಆದರೆ, ಮಾರನೆ ದಿನ 301 ಲಿಕ್ಕರ್ ಬಾಕ್ಸ್ ನಾಪತ್ತೆಯಾಗಿತ್ತು. ಈ ಸಂಬಂಧ ತನಿಖೆಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದರು. ಮದ್ಯ ಕಳವು ಪ್ರಕರಣದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವುದು ತನಿಖೆ ವೇಳೆ ತಿಳಿದುಬಂದಿತ್ತು.