ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ ➤ ರಾಜ್ಯದ ವಿವಿಧೆಡೆ ಕುಕ್ಕರ್, ಸೀರೆ ಹಾಗೂ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಚುನಾವಣಾ ಆಯೋಗದಿಂದ ಮತದಾನದ ದಿನಾಂಕ ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ಆರಂಭಿಸಿದ್ದಾರೆ. ಈ ಮೊದಲು ಸಂಕ್ರಾಂತಿ ಸಂದರ್ಭದಲ್ಲಿ ಮತದಾರರಿಗೆ ಕೆಲವೊಂದು ಗಿಫ್ಟ್ ನೀಡುತ್ತಿದ್ದ ಆಕಾಂಕ್ಷಿಗಳು, ಇದೀಗ ಯುಗಾದಿ- ರಂಜಾನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಸೀರೆ, ಕುಕ್ಕರ್ ಹಾಗೂ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸುತ್ತಿರುವ ಕುರಿತು ಆರೋಪಿಸಲಾಗಿದೆ.

ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ವಶಪಡಿಸಿಕೊಳ್ಳುವ ಕಾರ್ಯವೂ ನಡೆಯುತ್ತಿದ್ದು, ಯಲಬುರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 54,750 ರೂಪಾಯಿ ಮೌಲ್ಯದ 730 ಸೀರೆಗಳು ಪತ್ತೆಯಾಗಿವೆ. ಹಾಗೆಯೇ ರಾಮನಗರ ತಾಲೂಕಿನ ಕರಿಕಲ್ ದೊಡ್ಡಿ ಗ್ರಾಮದ ಬಳಿ 2900 ಕುಕ್ಕರ್ ಗಳು, ಕುಣಿಗಲ್ ತಾಲೂಕಿನ ಅಂಚೆಪಾಳ್ಯದ ಚೆಕ್ ಪೋಸ್ಟ್ ಬಳಿ 1,142 ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಬಾಡೂಟವಂತೂ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದ್ದು, ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನ ನಡುವೆಯೂ ಗುಪ್ತವಾಗಿ ಈ ಚಟುವಟಿಕೆ ಆರಂಭವಾಗಿದೆ.

error: Content is protected !!

Join the Group

Join WhatsApp Group