ಕಡಬ: ಮಿತಿಮೀರಿದ ಕಾಡಾನೆಗಳ ಉಪಟಳ ➤ ‘ಆಪರೇಷನ್ ಎಲಿಫೆಂಟ್’ ಪುನರಾರಂಭಿಸುವಂತೆ ನೀತಿ ತಂಡ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ. 17. ಕಳೆದ ತಿಂಗಳು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬಳಿಕವೂ ಕಾಡಾನೆಗಳ ಉಪಟಳ ಜನರನ್ನು ತಲ್ಲಣಗೊಳಿಸಿದ್ದು, ಆನೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೂಡಲೇ ಪುನರಾರಂಭಿಸಬೇಕು ಎಂದು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ. ಅವರು ಆಗ್ರಹಿಸಿದ್ದಾರೆ. ಈ ಕುರಿತಂತೆ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಜೀವಭಯ ಹುಟ್ಟಿಸಿರುವ ಎಲ್ಲ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆಯು, ಒಂದು ಸಾಧು ಸ್ವಭಾವದ ಕಾಡಾನೆಯನ್ನು ಸೆರೆಹಿಡಿದು ಅದೇ ನರಹಂತಕ ಆನೆ ಎಂದು ಹೇಳಿ ಜನರನ್ನು ನಂಬಿಸಿ ಮೂರೇ ದಿನಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಖಂಡನೀಯ. ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, ಕೊಣಾಜೆ, ಕೊಂಬಾರು, ಸಿರಿಬಾಗಿಲು, ಶಿರಾಡಿ, ಐತ್ತೂರು ಪ್ರದೇಶದಲ್ಲಿ ಜನರಿಗೆ ಪ್ರತಿನಿತ್ಯ ಆನೆಗಳು ಕಾಣಸಿಗುತ್ತಿವೆ. ಆದರೆ ಆನೆಗಳ ಇರುವಿಕೆಯ ಬಗ್ಗೆ ಮಾಹಿತಿ ನೀಡಲು ಅರಣ್ಯ ಇಲಾಖೆಗೆ ದೂರವಾಣಿ ಕರೆ ಮಾಡಿದರೆ ಅರಣ್ಯಾಧಿಕಾರಿಗಳು ಕರೆಯನ್ನೇ ಸ್ವೀಕರಿಸುತ್ತಿಲ್ಲ ಎಂದು ದೂರಿದರು. ಅಲ್ಲದೇ ಆನೆ ಹಾವಳಿಯ ಪ್ರದೇಶದ ಜನರು ಕರೆ ಮಾಡುವುದಕ್ಕಾಗಿ ಸಹಾಯವಾಣಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಆನೆ ಹಾವಳಿಯನ್ನು ನಿಯಂತ್ರಿಸಲು ಆನೆ ಕಂದಕ ನಿರ್ಮಿಸುವಲ್ಲಿಯೂ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಕೇವಲ ಒಂದು ಜೆಸಿಬಿ ಯಂತ್ರದಲ್ಲಿ ಆಮೆಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಹೆಚ್ಚುವರಿ ಯಂತ್ರಗಳನ್ನು ತರಿಸಿ ಕಾಡಿನಿಂದ ಜನವಸತಿ ಪ್ರದೇಶಕ್ಕೆ ಆನೆಗಳು ಬರುವ ಎಲ್ಲಾ ಕಡೆ ಆನೆ ಕಂದಕ ನಿರ್ಮಿಸಬೇಕು. ಆನೆಗಳು ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ಜನರು ಓಡಾಡದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು. ಆನೆ ದಾಳಿಯಿಂದಾಗುವ ಕೃಷಿ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು. ರಸ್ತೆ ಸಂಪರ್ಕ, ಮೊಬೈಲ್ ನೆಟ್‌ವರ್ಕ್ ಇಲ್ಲದ ಕಡೆ ರಾತ್ರಿ ಹಗಲು ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳಿಗೆ ವಾಕಿಟಾಕಿ ಸೇರಿದಂತೆ ಅಧುನಿಕ ಸಲಕರಣೆಗಳನ್ನು ಒದಗಿಸಬೇಕು. ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಬೆಂಕಿ ಅವಘಡ, ಕಾಡ್ಗಿಚ್ಚು ಕಾಣಿಸಿಕೊಂಡಾಗ ತುರ್ತು ಕಾರ್ಯಾಚರಣೆ ನಡೆಸಲು ಕಡಬದಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕು. ಆನೆ ಹಾವಳಿಯ ಪ್ರದೇಶಗಳ ಹಾಲಿನ ಡಿಪೋಗಳಲ್ಲಿ ಕತ್ತಲಾಗುವ ಮೊದಲೇ ಹಾಲು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು. ಕೃಷಿಕರು ಹಗಲು ಹೊತ್ತಿನಲ್ಲಿ ತೋಟಗಳಿಗೆ ನೀರುಣಿಸಲು ಸಾಧ್ಯವಾಗುವಂತೆ ನಿರಂತರ ವಿದ್ಯುತ್ ಪೂರೈಸಬೇಕು. ಕಾಡಂಚಿನ ನದಿಗಳಲ್ಲಿ ಕಾಡು ಪ್ರಾಣಿಗಳಿಗೆ ತೊಂದರೆಯಾಗುವಂತೆ ನಡೆಯುವ ಗಣಿಗಾರಿಕೆ ಹಾಗೂ ಮರಳುಗಾರಿಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ಜಯಂತ್ ಟಿ, ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

Also Read  ಜೀವಕ್ಕೆ ಕುತ್ತು ತಂದ ಮದ್ಯ ಸೇವನೆ ಚಾಲೆಂಜ್ - ಸೇವಿಸಿದ ಅರ್ಧ ಗಂಟೆಯಲ್ಲಿ ವ್ಯಕ್ತಿ ಮೃತ್ಯು

ಅಮಾಯಕರ ಬಂಧನ: ಕೊಂಬಾರು ಗ್ರಾಮದ ಮಂಡೆಕರ ಬಳಿ ಅರಣ್ಯ ಇಲಾಖೆಯ ನೇತೃತ್ವಲ್ಲಿ ಕಾಡಾನೆಯನ್ನು ಸೆರೆ ಹಿಡಿದು ಸಾಗಿಸುವ ಕಾರ್ಯಾಚರಣೆಯ ವೇಳೆ ಕೆಲವು ಮಂದಿ ಕಿಡಿಗೇಡಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ವಾಹನಗಳಿಗೆ ಹಾನಿ ಮಾಡಿರುವುದು ಖಂಡನೀಯ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಕೊಂಬಾರಿನ ಅಜಿತ್‌ಕುಮಾರ್ ಹಾಗೂ ಉಮೇಶ್ ಕಮರ್ಕಜೆ ಎಂಬ ಇಬ್ಬರು ಅಮಾಯಕರನ್ನು ಬಂಧಿಸಿ ಜೈಲಿಗಟ್ಟಿರುವುದು ಸರಿಯಲ್ಲ. ಗ್ರಾ.ಪಂ.ನ ಮಾಜಿ ಅಧ್ಯಕ್ಷರಾಗಿರುವ ಅಜಿತ್‌ಕುಮಾರ್ ಅವರು ಜನರ ಪರವಾಗಿ ಅರಣ್ಯಾಧಿಕಾರಿಗೆ ಕರೆ ಮಾಡಿ ಮಾತನಾಡಿದ ದ್ವೇಷದಿಂದ ಘಟನೆ ವೇಳೆ ಸ್ಥಳದಲ್ಲಿಯೇ ಇಲ್ಲದಿದ್ದ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಜಯಂತ್ ಟಿ. ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ನೀತಿ ತಂಡದ ಕಡಬ ತಾಲೂಕು ಅಧ್ಯಕ್ಷ ರಂಜಿತ್ ಎಂ.ಎ. ಹಾಗೂ ಸದಸ್ಯ ವಿನೋದ್ ಉಪಸ್ಥಿತರಿದ್ದರು.

Also Read  ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರಕಾರ

error: Content is protected !!
Scroll to Top