ಮಾ. 21ರಿಂದ 23 ಸಾವಿರ ಬಸ್ ಗಳ ಸಂಚಾರ ಬಂದ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 15. ಸಾರಿಗೆ ನೌಕರರ ವೇತನ ಹೆಚ್ಚಳ, ವಿವಿಧ ಭತ್ಯೆಗಳ ಹೆಚ್ಚಳ, ಸೇವೆಯಿಂದ ವಜಾಗೊಂಡಿರುವ ನೌಕರರ ಮರುನೇಮಕ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಮಾ. 21ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‍ ಇದರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ‘ಮಾ.21ರಂದು ಬೆಳಗ್ಗೆ 6ರಿಂದ 4 ನಿಗಮದ 23 ಸಾವಿರ ಬಸ್​ಗಳು, 1 ಲಕ್ಷದ 25 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಹಿಂದಿನ ದಿನ ರಾತ್ರಿಯೇ 23 ಸಾವಿರ ಬಸ್​ಗಳು ಡಿಪೋ ಒಳಗಡೆ ಇರಲಿದೆ. ಹೊರಗೆ ಬರಲ್ಲ’ ಎಂದು ಮಾಹಿತಿ ನೀಡಿದರು. ಮುಷ್ಕರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಪಾಲ್ಗೊಂಡು ರಾಜ್ಯ ಸರಕಾರ ಸಾರಿಗೆ ನೌಕರರಿಗೆ ಮಾಡುತ್ತಿರುವ ಮಲತಾಯಿ ಧೋರಣೆ ಹಾಗೂ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸಬೇಕು ಎಂದರು. ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ನೌಕರರ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟು ತಿಂಗಳುಗಳೇ ಕಳೆದಿವೆ. ಆದರೆ ಈವರೆಗೆ ಯಾವುದೇ ರೀತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿಲ್ಲ. ಇನ್ನೊಂದು ತಿಂಗಳು ಕಳೆದರೆ ಸರಕಾರದ ಅವಧಿಯೂ ಪೂರ್ಣಗೊಳ್ಳುತ್ತದೆ. ಆಗ ನೌಕರರ ಗತಿಯೇನು ಎಂದು ಅವರು ಪ್ರಶ್ನಿಸಿದರು. ಈಗಾಗಲೇ ಬೆಲೆ ಏರಿಕೆಯಿಂದಾಗಿ ಸಾರಿಗೆ ನೌಕರರು ಸಂಕಷ್ಟದಲ್ಲಿದ್ದು, ಕೂಡಲೇ ಸರಕಾರವು ನೌಕರರ ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕಾಗಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಒಕ್ಕೊರಲಿನಿಂದ ಒತ್ತಾಯಿಸಬೇಕು ಎಂದು ಅನಂತಸುಬ್ಬರಾವ್ ತಿಳಿಸಿದರು.

Also Read  ಮಂಗಳೂರಿನಲ್ಲಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪನೆ ➤ ಶಾಸಕ ಕಾಮತ್

error: Content is protected !!
Scroll to Top