ಉದ್ಯೋಗದ ಹೆಸರಿನಲ್ಲಿ 15.34 ಲಕ್ಷ ರೂ. ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ವಾಟ್ಸ್ ಆಯಪ್‌ನಲ್ಲಿ ಬಂದ ಅರೆಕಾಲಿಕ ಉದ್ಯೋಗದ ಜಾಹೀರಾತನ್ನು ನಂಬಿ ಒಟ್ಟು 15.34 ಲಕ್ಷ ರೂ. ಕಳೆದುಕೊಂಡ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ವ್ಯಕ್ತಿಯ ವಾಟ್ಸಾಪ್ ಗೆ ಮಾರ್ಚ್ 4ರಂದು ಅಪರಿಚಿತ ವ್ಯಕ್ತಿಯೋರ್ವ ಅರೆಕಾಲಿಕ ಉದ್ಯೋಗದ ಕುರಿತು ಸಂದೇಶ ಕಳುಹಿಸಿದ್ದು, ಅದರ ಜೊತೆಗೆ ಗೂಗಲ್‌ ಲಿಂಕ್ ಒಂದನ್ನು ಕಳುಹಿಸಲಾಗಿತ್ತು. ಅಲ್ಲದೇ ಟೆಲಿಗ್ರಾಂ ಆಯಪ್‌ ಡೌನ್‌ಲೋಡ್‌ ಮಾಡುವಂತೆ ಸೂಚಿಸಿದ್ದ. ದೂರುದಾರ ವ್ಯಕ್ತಿಯು ಸಂದೇಶದ ಪ್ರಕಾರ ಟೆಲಿಗ್ರಾಂ ಆಯಪ್‌ ಡೌನ್‌ಲೋಡ್ ಮಾಡಿದಾಗ ಆರಂಭದಲ್ಲಿ 150 ರೂ. ನಂತರ 2000 ರೂ. ಹಣವನ್ನು ಹಾಕಲು ಸೂಚಿಸಿದ್ದು, ಬಳಿಕ ದೂರುದಾರರಿಗೆ 2,800 ರೂ. ವಾಪಾಸ್‌ ಬಂದಿತ್ತು. ಇದನ್ನು ನಂಬಿದ ಅವರು ಆರೋಪಿಯು ಕಳುಹಿಸಿದ್ದ ಲಿಂಕ್ ನ್ನು ಒತ್ತಿ, ತಮ್ಮ ಹೆಸರಿನ ಖಾತೆ ರಚಿಸಲು ವಿವರಗಳನ್ನು ನಮೂದಿಸಿದ್ದರು. ಆ ಖಾತೆಗೆ 2,800 ಕಳುಹಿಸಿದ್ದರು. ನಂತರ ಯುಪಿಐ ಮೂಲಕ 9 ಸಾವಿರ, ಬ್ಯಾಂಕ್‌ ಖಾತೆಯೊಂದಕ್ಕೆ 25 ಸಾವಿರ ಕಳುಹಿಸಿದ್ದರು. ಇದೇ ರೀತಿ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ಒಟ್ಟು 15,34,000 ರೂ. ವಂಚನೆ ಮಾಡಲಾಗಿದೆ ಎಂದು ದೂರುದಾರರು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಬಾಲಕರ ವಿದ್ಯಾರ್ಥಿ ನಿಲಯಗಳ ಅರ್ಜಿ ಆಹ್ವಾನಕ್ಕೆ ಅವಧಿ ವಿಸ್ತರಣೆ

error: Content is protected !!
Scroll to Top