(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯ ನಂತರ ಜಿಲ್ಲೆಯ ಹಲವೆಡೆ ಕೋಮು ಸಂಘರ್ಷಗಳು ಆರಂಭಗೊಂಡಿದ್ದು, ಬುಧವಾರ ರಾತ್ರಿ ಕೊಟ್ಟಾರ ಚೌಕಿಯಲ್ಲಿ ವ್ಯಕ್ತಿಯೊಬ್ಬರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಲಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಆಕಾಶಭವನ ನಿವಾಸಿ ಬಶೀರ್ (42) ಎಂದು ಗುರುತಿಸಲಾಗಿದೆ. ಕೊಟ್ಟಾರದಲ್ಲಿರುವ ತನ್ನ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ಸಂದರ್ಭ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆಗೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಚಾಲಕರಾದ ರೋಹಿತ್ ಮತ್ತು ಶೇಖರ್ ರವರು ಬಶೀರ್ ಬಿದ್ದುಕೊಂಡಿರುವುದನ್ನು ನೋಡಿ ತಕ್ಷಣವೇ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.