(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಸತತವಾಗಿ ಬೆಂಕಿ ಅನಾಹುತ ಉಂಟಾಗುತ್ತಿದ್ದು ಇದಕ್ಕೆ ಜಿಲ್ಲಾಡಳಿತ, ಶಾಸಕ, ಸಂಸದರು ಹಾಗೂ ಮಹಾನಗರಪಾಲಿಕೆಯ ಬೇಜವಾಬ್ದಾರಿತನ ಕಾರಣ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕರಾದ ನವೀನ್ ಆರ್ ಡಿಸೋಜಾ ಆರೋಪಿಸಿದ್ದಾರೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಸತತವಾಗಿ ಬೆಂಕಿ ಅನಾಹುತ ಉಂಟಾಗುತ್ತಿರುವುದರಿಂದ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶಗಳಾದ ತಿರುವೈಲು, ವಾಮಂಜೂರು, ಕುಡುಪು, ಬೋಂದೇಲ್, ಪದವಿನಂಗಡಿ, ಕಾವೂರು ಮತ್ತು ಯೆಯ್ಯಾಡಿ ಪ್ರದೇಶಗಳಿಗೆ ತುಂಬಾ ತೊಂದರೆಯಾಗಿದೆ. ಸಣ್ಣ ಮಕ್ಕಳು, ಹಿರಿಯರು, ಗರ್ಭಿಣಿ ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರಿಗೆ, ಅಸ್ತಮಾ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ದುರಂತವು ಮನಪಾ ದ ಆಡಳಿತ ವೈಫಲ್ಯ, ಜಿಲ್ಲಾಡಳಿತದ ವೈಫಲ್ಯ, ಶಾಸಕರ ಬೇಜವಾಬ್ದಾರಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ಗಮನಹರಿಸದೆ ಇರುವುದು ನಿಮ್ಮ ಬೇಜವಾಬ್ದಾರಿತನ ತೋರುತ್ತಿದೆ. ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿ ಆಗ್ರಹಿಸಿದ್ದಾರೆ.