(ನ್ಯೂಸ್ ಕಡಬ) newskadaba.com ಬೆಂಗಳೂರು,ಮಾ. 14. ಈ ವರ್ಷ ಕರ್ನಾಟಕದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಾರ್ಚ್ 6ರಿಂದ 8ರ ನಡುವೆ ಅಕಾಲಿಕ ಮಳೆಯಾಗಿದ್ದು, ಇದು ಹಲವೆಡೆ ಬೆಳೆ ಹಾನಿಗೂ ಕಾರಣವಾಗಿದೆ. ಅಂತೆಯೇ ದೇಶದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಮಾರ್ಚ್ 15ರ ತನಕ ಹಗುರವಾದ ಮಳೆಯಾಗಲಿದೆ. ಮಾರ್ಚ್ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.