(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಆರಂಭವಾಗುತ್ತಿದ್ದು, ಮಾ.29ರವರೆಗೆ ಮುಂದುವರಿಯಲಿದೆ. ರಾಜ್ಯದಲ್ಲಿ ಈ ಬಾರಿ 7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
1,109 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದೆ. 7,26,195 ವಿದ್ಯಾರ್ಥಿಗಳಲ್ಲಿ 3,63,698 ಬಾಲಕರು ಮತ್ತು 3,62,497 ಬಾಲಕಿಯರು ಸೇರಿದ್ದಾರೆ. ಒಟ್ಟು 5,716 ಕಾಲೇಜುಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರವಹಿಸಲು 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ ಮತ್ತು 2373 ವಿಶೇಷ ಜಾಗೃತ ದಳದವರನ್ನು ನೇಮಿಸಲಾಗಿದೆ.