ವಿಮಾನದಲ್ಲಿ ಧೂಮಪಾನ ➤ ಯುವತಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪಕ್ಕೆ ಸಂಬಂಧಿಸಿ ಯುವತಿಯೋರ್ವಳನ್ನು ಪೊಲೀಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತ ಯುವತಿಯನ್ನು ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಎಂದು ಗುರುತಿಸಲಾಗಿದೆ. ಈಕೆ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ಸಂಖ್ಯೆ 6E 716 ರ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ವಿಮಾನವು ಲ್ಯಾಂಡ್‌ ಆಗುವ 30 ನಿಮಿಷ ಮೊದಲು ಪ್ರಿಯಾಂಕಾ ಧೂಮಪಾನ ಮಾಡಲೆಂದು ಶೌಚಾಲಯಕ್ಕೆ ತೆರಳಿದ್ದು, ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತೆರೆಯುವಂತೆ ಕೇಳಿದಾಗ ಡಸ್ಟ್ ಬಿನ್‌ನಲ್ಲಿ ಸಿಗರೇಟ್ ಪತ್ತೆಯಾಗಿದೆ. ತಕ್ಷಣವೇ ಸಿಬ್ಬಂದಿಯು ಸುರಕ್ಷಾ ಕ್ರಮ ಕೈಗೊಂಡಿದ್ದು, ಬಳಿಕ ವಿಮಾನದ ಕ್ಯಾಪ್ಟನ್, ಪ್ರಿಯಾಂಕಾ ಅವರನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಪ್ರಿಯಾಂಕಾ ಅವರನ್ನು ಭದ್ರತಾ ವಿಭಾಗಕ್ಕೆ ಒಪ್ಪಿಸಿದ್ದು, ಇಂಟರ್‌ಗ್ಲೋಬ್ ಏವಿಯೇಷನ್‌ನ ಭದ್ರತಾ ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ್ ಕೆ ಅವರು ಆಕೆಯನ್ನು ಪೊಲೀಸರ ಕೈಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Also Read  ಕರ್ನಾಟಕ ರಾಜ್ಯಾದ್ಯಂತ ಮುಂದಿನ ಎರಡು ದಿನ ಭಾರೀ ಮಳೆ ➤ ಹವಾಮಾನ ಇಲಾಖೆಯಿಂದ ಮುನ್ಸೂಚನೆ

error: Content is protected !!
Scroll to Top