ಮಹಿಳೆಯರಿಗೆ ತಂತ್ರಜ್ಞಾನದ ಅರಿವು ಅವಶ್ಯ ➤ ಡಾ. ಶ್ರೀದೇವಿ ಸರಳಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ಡಿಜಿಟಲ್ ತಂತ್ರಜ್ಞಾನದ ಮುನ್ನುಡಿಯೊಂದಿಗೆ ಊಹಿಸಲಾಗದ ಸಾಮಾಜಿಕ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಒಳಿತು ಹಾಗೂ ಕೆಡುಕುಗಳನ್ನು ಅವಶ್ಯವಾಗಿ ತಿಳಿದುಕೊಳ್ಳುವಂತೆ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಶ್ರೀದೇವಿ ಸರಳಾಯ ಕರೆ ನೀಡಿದರು. ಅವರು ಬುಧವಾರದಂದು ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ವಾಮಂಜೂರಿನ ಸೌಹಾರ್ದ ಮಹಿಳಾ ಒಕ್ಕೂಟದ ಸಹಕಾರದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯೋಗಸ್ಥ ಮಹಿಳೆಯಾಗಲು ಬೇಕಾದ ವಾತಾವರಣವನ್ನು ರೂಪಿಸಲು ತಂತ್ರಜ್ಞಾನದ ಬಳಕೆ ಬೇಕು. ಆದರೆ ಯುವ ಜನಾಂಗವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಮಹಿಳೆಯರು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಂದರ್ಭಗಳು ಎದುರಾಗಬಹುದು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಧರ್ಮಜ್ಯೋತಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷೆ ಸಿಸ್ಟರ್ ಲೀನಾ ವಳ್ಳೂಕರನ್ ಜೋಸ್, ಮಹಿಳೆಯರು ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು ಸಕಾರಾತ್ಮಕ ಚಿಂತನೆಗಳಿಂದ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಅಂತಹ ಪ್ರಯತ್ನಗಳನ್ನು ಮಾಡಲು ನಾವು ಶ್ರಮಿಸಬೇಕು ಎಂದರು. ಮಹಿಳೆಯರು ತಮ್ಮ ದೈನಂದಿನ ಜೀವನ ಉತ್ತಮವಾಗಿ ನಡೆಸಲು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಬಗ್ಗೆ ಆಳವಾಗಿ ತಿಳಿದುಕೊಂಡು ತಮ್ಮ ಕುಟುಂಬ ಮತ್ತು ಸಾಮಾಜಿಕ ಬೆಳವಣಿಗೆಗಳಿಗೆ ಅವುಗಳನ್ನು ಅನುಸರಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಕೆ. ವಿ. ರಾವ್ ಹೇಳಿದರು. ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಿನಿಟಾ ಲೂಯಿಸ್ ವಂದಿಸಿದರು. ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸೌಹಾರ್ದ ಮಹಿಳಾ ಒಕ್ಕೂಟದ ಮಹಿಳೆಯರಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

error: Content is protected !!

Join the Group

Join WhatsApp Group