(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ನಮ್ಮ ಕುಟುಂಬ ಹಾಗೂ ಸಮಾಜವನ್ನು ಬೆಳಗುವ ಶಕ್ತಿ ಇರುವುದು ಮಹಿಳೆಗೆ ಮಾತ್ರ, ಇಡೀ ವಿಶ್ವವೇ ಆರೋಗ್ಯವಾಗಿರಬೇಕು ಎಲ್ಲರೂ ಸಂತೋಷ, ನೆಮ್ಮದಿಯಿಂದಿರಬೇಕು ಎಂದರೆ ಅದು ಮಹಿಳೆಯಿಂದ ಸಾಧ್ಯ. ಹಾಗಾಗಿ ಸ್ತ್ರೀಯರಿಗೆ ವಿಶೇಷ ಗೌರವ ಕೊಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಅಭಿಪ್ರಾಯ ಪಟ್ಟರು.
ಇವರು ಬುಧವಾರದಂದು ನಗರದ ಕರಾವಳಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾರ್ಚ್ 8ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ದಿನದ ಆಚರಣೆಯಲ್ಲ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ನಾವು ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುತ್ತೇವೆ, ದೇವತೆ ಹಾಗೇ ನೋಡುತ್ತೇವೆ, ಮಹಿಳೆ ಅಬಲೆಯಲ್ಲ ಸಬಲೆ. ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗಲು ಮಹಿಳೆಯಿಂದ ಮಾತ್ರ ಸಾಧ್ಯ, ಅವರ ಬಗ್ಗೆ ಅಪಾರ ಕಾಳಜಿಯಿಟ್ಟು ಶಿಕ್ಷಣ, ರಾಜಕೀಯ, ಕೀಡೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಅವರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಹಿನ್ನೆಲೆ ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ ಸೋಜ, ವೈಟ್ ಲಿಫ್ಟಿಂಗ್ ತರಬೇತುದಾರ ಸರಸ್ವತಿ ಪುತ್ರನ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷೆಯಾದ ಲೀಲ್ಲಿ ಪಾಯಸ್, ಸುಳ್ಯ ತಾಲೂಕಿನ ಯುವಜನ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ದೇವರಾಜ್ ಮುತ್ಲಾಜೆ ವೇದಿಕೆಯಲ್ಲಿದ್ದರು.