81ರ ವೃದ್ದನನ್ನು ಜೈಲು ಶಿಕ್ಷೆಯ ಬದಲು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್..!!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 07. 81 ವರ್ಷ ಪ್ರಾಯದ ವೃದ್ಧನ ಸನ್ನಡತೆ ಹಾಗೂ ಪ್ರಾಮಾಣಿಕತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಜೈಲು ಶಿಕ್ಷೆಯ ಬದಲು ಅಂಗನವಾಡಿಯಲ್ಲಿ ಸೇವೆ ಮಾಡಲು ಕಳುಹಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕ ಅವರದ್ದು ಬಡ ಕುಟುಂಬ. ಇವರು 2008ರಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿತ್ತು. ಆದರೆ ದೂರುದಾರ ವ್ಯಕ್ತಿ ಆರೋಪಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂದು ಮಂಗಳೂರಿನ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಆರೋಪಿ ಐತಪ್ಪ ನಾಯ್ಕನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿತ್ತು. ಈ ತೀರ್ಪನ್ನು ಪ್ರಶ್ನಿಸಿ ಐತಪ್ಪ ನಾಯ್ಕರ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಮಕ್ಕಳಿಲ್ಲದ ವೃದ್ಧ ಮತ್ತು ಮನೆಯಲ್ಲಿ ಪತ್ನಿ ಒಬ್ಬಂಟಿಯಾಗಿರುವುದರಿಂದ ವಯಸ್ಸನ್ನು ನೋಡಿ ಶಿಕ್ಷೆಗೆ ವಿನಾಯ್ತಿ ನೀಡಬೇಕೆಂದು ಕೋರಿದ್ದರು. ಆರೋಪಿ ಐತಪ್ಪ ನಾಯ್ಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಕೆಳಗಿನ ಕೋರ್ಟಿನ ಶಿಕ್ಷೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ಒಂದು ವರ್ಷಗಳ ಕಾಲ ಸ್ಥಳೀಯ ಅಂಗನವಾಡಿಯಲ್ಲಿ ವೇತನರಹಿತ ಸೇವೆ ನೀಡುವಂತೆ ಆದೇಶಿಸಿದ್ದಾರೆ. ಅದರಂತೆ, ಕರೋಪಾಡಿ ಗ್ರಾಮದ ಅಂಗನವಾಡಿಯಲ್ಲಿ ವೃದ್ಧ ಐತಪ್ಪ ನಾಯ್ಕರವರು ಶುಚಿತ್ವದ ಕೆಲಸ ಆರಂಭಿಸಿದ್ದಾರೆ.

Also Read  ಹಿಂದೂ ಯುವತಿಯನ್ನು ಯಾಮಾರಿಸಿ ಮದುವೆಯಾದ ಸುಳ್ಯದ ಮುಸ್ಲಿಂ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯುವತಿಯ ಕಡೆಯವರು

error: Content is protected !!
Scroll to Top