ಹೆಚ್3ಎನ್2 ವೈರಸ್ ಹಾವಳಿ- ಮುಂಜಾಗರೂಕತೆ ಅಗತ್ಯ ➤ ಆರೋಗ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 06. ಎಲ್ಲೆಡೆ ಶೀತ, ಕೆಮ್ಮು, ಜ್ವರದ ಸಮಸ್ಯೆ ಹೆಚ್ಚಾಗಿ ವರದಿಯಾಗುತ್ತಿರುವುದರ ಜೊತೆಗೆ ಎಚ್‌3ಎನ್‌2 ವೈರಸ್‌ ಹಾವಳಿ ತೀವ್ರಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಮುಂಜಾಗರೂಕತೆ ವಹಿಸಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಇದು ಮಾರಣಾಂತಿಕ ಖಾಯಿಲೆ ಅಲ್ಲ, ವೈರಸ್‌ನಿಂದಾಗಿ ಒಬ್ಬರಿಂದ ಒಬ್ಬರಿಗೆ ಗಾಳಿಯಲ್ಲಿ ಹರಡುವ ಜ್ವರವಾಗಿದ್ದು, ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಇದು ರೂಪಾಂತರಗೊಂಡು ಹೊಸ ತಳಿ ಸೃಷ್ಟಿಯಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವಿಶ್ರಾಂತಿ ಪಡೆಯುವುದು ಮುಖ್ಯ. ಎರಡು -ಮೂರು ದಿನಗಳಲ್ಲಿ ಜ್ವರ-ಮೈ ಕೈ ನೋವು ಕಡಿಮೆಯಾಗುತ್ತದೆ. ಕೆಮ್ಮು- ಕಫ ಎರಡು ವಾರಗಳವರೆಗೆ ಇರುವ ಸಾಧ್ಯತೆಯಿದೆ. ಈ ಸಂಬಂಧ ರಾಜ್ಯ ಮಟ್ಟದಲ್ಲಿ ಯಾವುದೇ ಸಭೆ ನಡೆದಿಲ್ಲ, ಈ ವಾರ ನಡೆಯುವ ಸಾಧ್ಯತೆಯಿದ್ದು, ಬಳಿಕ ಜಿಲ್ಲೆಗಳಿಗೆ ಈ ಕುರಿತು ನಿರ್ದೇಶನ ನೀಡುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಚ್‌3ಎನ್‌2 ವೈರಲ್‌ ಜ್ವರವಾಗಿದ್ದು, ಜಿಲ್ಲೆಯಲ್ಲಿ ಈ ಜ್ವರಕ್ಕೆ ಸಂಬಂಧಿಸಿ ಟೆಸ್ಟಿಂಗ್‌ ಆರಂಭಿಸಿಲ್ಲ. ದೇಶದ ವಿವಿಧೆಡೆ ವೈರಾಲಜಿ ಲ್ಯಾಬ್‌ಗಳಲ್ಲಿ ಟೆಸ್ಟ್‌ ಮಾಡುವಾಗ ಎಚ್‌3ಎನ್‌2 ಎಂದು ವರದಿ ಬಂದಿದೆ. ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

Also Read  ಬೆಳ್ತಂಗಡಿ: ಕುಟುಂಬ ಸಮೇತರಾಗಿ ಶ್ರೀ ಸದಾಶಿವ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ

error: Content is protected !!
Scroll to Top