(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮೌಲ್ಯಾಧಾರಿತ ಶಿಕ್ಷಣದೊಂದಿಗೆ ರಾಷ್ಟ್ರಭಕ್ತಿಯ ಜ್ಞಾನವನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪ್ರೇರಣೆ ದೊರೆಯುತ್ತದೆ. ಈ ಕೆಲಸವನ್ನು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಮಾಡುತ್ತಿದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ ವ್ಯಕ್ತಪಡಿಸಿದರು.
ಅವರು ಶನಿವಾರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಸಿಸ್ಕೋ ಸಂಭ್ರಮ ಪ್ರಾಯೋಜಿತ ಸಮುದಾಯ ಕಂಪ್ಯುಟರ್ ಶಿಕ್ಷಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣಕ್ಕೆ ಕೊರತೆಯಿಲ್ಲ, ಮೌಲ್ಯಾಧಾರಿತ ಸಂಸ್ಕಾರಯುತ ಶಿಕ್ಷಣವು ಇನ್ನಷ್ಟು ಹೆಚ್ಚಾಗಿ ದೊರೆಯಬೇಕು, ರಾಷ್ಟ್ರ ಶಕ್ತಿಯ ವ್ಯಕ್ತಿ ನಿರ್ಮಾಣದ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ನಡೆದಾಗ ಭವ್ಯ ಭಾರತದ ಕಲ್ಪನೆ ಈಡೇರುತ್ತದೆ. ಶಿಕ್ಷಣವನ್ನು ಉದ್ಯಮ ಮಾಡದೆ ಸೇವೆಯ ರೀತಿಯಲ್ಲಿ ಶಿಕ್ಷಣ ನೀಡುತ್ತಿರುವ ರಾಮಕುಂಜ ಶಿಕ್ಷಣ ಸಂಸ್ಥೆಗಳು ಇತರ ಸಂಸ್ಥೆಗಳಿಂದ ಭಿನ್ನವಾಗಿ ಎತ್ತರದ ಸ್ಥಾನದಲ್ಲಿ ಕಾಣುತ್ತವೆ ಎಂದು ಹೇಳಿದ ನಳಿನ್ ಕುಮಾರ್ ಯಾವುದೇ ಮತಧರ್ಮ, ಕೇಂದ್ರಗಳಿಗೆ ದಾನ ನೀಡುವುದಕ್ಕಿಂತ ಎಲ್ಲಾ ಮತಧರ್ಮದ ಸಮುದಾಯದವರು ಒಂದೆಡೆ ವಿದ್ಯೆ ಪಡೆಯುತ್ತಿರುವ ವಿದ್ಯಾಸಂಸ್ಥೆಗಳಿಗೆ ದಾನ ನೀಡಿದಾಗ ಹೆಚ್ಚು ಪುಣ್ಯಬರುತ್ತದೆ ಎಂದರು.
ಸಭಾಭವನವನ್ನು ಉದ್ಘಾಟಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯ ಡಾ| ರಘು ಬೆಳ್ಳಿಪ್ಪಾಡಿ ಮಾತನಾಡಿ, ಶಿಕ್ಷಣ ಎಂಬುದು ಸಮಾಜಮುಖಿಯಾಗಿ ಬೆಳೆದು ಬರಬೇಕು. ಯಾವುದೇ ವ್ಯಕ್ತಿ ತಾನು ಪಡೆದ ಪದವಿ ಸಾರ್ಥಕವಾಗಬೇಕಾದರೆ ಆತ ಸಮಾಕ್ಕಾಗಿ ದುಡಿಯಬೇಕು. ರಾಷ್ಟ್ರಕಟ್ಟುವ, ಉತ್ತಮ ಸಮಾಜ ನಿರ್ಮಾಣದ ವಿವೇಚನೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗಳು ಬೇಕಾಗಿದ್ದು, ಈ ಕೆಲಸವನ್ನು ರಾಮಕುಂಜ ವಿದ್ಯಾಸಂಸ್ಥೆ ಮಾಡುತ್ತಿದೆ ಎಂದರು. ಕಾಲೇಜಿಗೆ ಗ್ರಂಥಾಲಯವನ್ನು ನೀಡಿ ಅದರ ಉದ್ಘಾಟನೆ ನೆರವೇರಸಿದ ಕರ್ನಾಟಕ ಬ್ಯಾಂಕಿನ ನಿವೃತ್ತ ಅಧಿಕಾರಿ ಬರೆಕೆರೆ ಕೃಪಾ ವೆಂಕಟ್ರಮಣ ಕೆದಿಲಾಯ ಮಾತನಾಡಿ, ಪುಸ್ತಕದ ಜ್ಞಾನ ಭಂಡಾರ ಬದುಕಿನ ವಿಕಸನಕ್ಕೆ ಪುರಕವಾಗಿದೆ ಎಂದರು. ಪ್ರಯೋಗಾಲಯವನ್ನು ಉದ್ಘಾಟಿಸಿದ ಸಿಸ್ಕೋ ಇಂಡಿಯಾ ಸಂಸ್ಥೆಯ ಮ್ಯಾನೇಜರ್ ಭಾಸ್ಕರ್ ಬಿ.ಎಸ್ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ, sಸಿಸ್ಕೋ ಸಂಸ್ಥೆಯ ಧರ್ಮೇಂದ್ರ ಶುಭ ಹಾರೈಸಿದರು. ಕಾಲೇಜಿನ ನಿರ್ದೆಶಕ ವೇದವ್ಯಾಸ ರಾಮಕುಂಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣ ಮೂರ್ತಿ ಕಲ್ಲೇರಿ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್ ನೈಮಿಷ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬರೆಕೆರ ಕೃಪಾ ವೆಂಕಟ್ರಮಣ ಕೆದಿಲಾಯ ಹಾಗೂ ಸಿಸ್ಕೋ ಸಂಸ್ಥೆಯ ಭಾಸ್ಕರ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಿನ್ಸಿಪಾಲ್ ಡಾ| ಸಂಕೀರ್ತ್ ಹೆಬ್ಬಾರ್ ಸ್ವಾಗತಿಸಿದರು. ಕಾಲೇಜಿನ ನಿರ್ಮಾಣ ಸಮಿತಿ ಅಧ್ಯಕ್ಷ ಟಿ.ನಾರಾಯಣ ಭಟ್ ಪ್ರಸ್ತಾವನೆಗೈದರು. ಉಪನ್ಯಾಸಕ ಗಣರಾಜ್ ಕುಂಬ್ಳೆ ಹಾಗೂ ಶಿಕ್ಷಕ ಸತೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.