ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ ➤ 6 ಮಂದಿಗೆ ಜೀವದಾನ

(ನ್ಯೂಸ್ ಕಡಬ) newskadaba.com ಮಣಿಪಾಲ, ಫೆ. 28. ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೋರ್ವರ ಅಂಗಾಂಗ ದಾನ ಮಾಡಿ ಆರು ಮಂದಿಗೆ ಜೀವದಾನ ನೀಡಿದ ಘಟನೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದಿದೆ.

44 ವರ್ಷದ ಕೊಡೇರಿ ಶಿಲ್ಪಾ ಮಾಧವರವರಿಗೆ ಬೈಂದೂರು ತಾಲೂಕಿನ ಮರವಂತೆ ಬಳಿ ಫೆಬ್ರವರಿ 26ರಂದು ರಸ್ತೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ವೈದ್ಯರು ಗಾಯಾಳುವನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬಾರದೇ ಇದ್ದು, ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಪ್ರಕಾರ ಶಿಲ್ಪಾ ಅವರನ್ನು ಎರಡು ಬಾರಿ ಪರಿಶೀಲಿಸಿದ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು. ನಂತರ, ಶಿಲ್ಪಾರವರ ಪತಿ ಪ್ರಸನ್ನ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು 6 ಜನರ ಜೀವ ಉಳಿಸಲು ಸಹಾಯಕವಾಯಿತು. ಜೀವನಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ ಆಸ್ಪತ್ರೆ ಬೆಂಗಳೂರು, ಒಂದು ಮೂತ್ರಪಿಂಡವನ್ನು ಎ.ಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು, ಒಂದು ಮೂತ್ರಪಿಂಡ ಹಾಗೂ ಚರ್ಮವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು. ಪ್ರಸನ್ನ ಕುಮಾರ್ ಮತ್ತು ಕುಟುಂಬ ಸದಸ್ಯರು “ಅಂಗದಾನ ಒಂದು ಪುಣ್ಯದ ಕೆಲಸ. ಶಿಲ್ಪಾ ಅವರು ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ” ಎಂದು ತಿಳಿಸಿದ್ದಾರೆ.

Also Read  ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ- ಅರ್ಜಿ ಆಹ್ವಾನ

error: Content is protected !!
Scroll to Top