(ನ್ಯೂಸ್ ಕಡಬ) newskadaba.com ಹಾವೇರಿ, ಡಿ.31. ಮುಂದಿನ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲ್ಲ. ಬದಲಾಗಿ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಸ್ಥಾನದ ರೇಸ್‌ನಲ್ಲಿ ಇದ್ದವರನ್ನು ಬಿಟ್ಟು ಅನಂತಕುಮಾರ ಹೆಗಡೆ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆಂದರೆ ಆರೆಸ್ಸೆಸ್ ಹಿನ್ನೆಲೆ ನೋಡಿ ಕೊಟ್ಟಿರುತ್ತಾರೆ. ಆರೆಸ್ಸೆಸ್‌ನವರಿಗೆ ಯಾರಿಗೆ ಎಲ್ಲಿಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಬಿಜೆಪಿಯಲ್ಲಿ ಲಿಂಗಾಯತರು ಕೆಲವರಿದ್ದು, ಅವರಿಗೆಲ್ಲ ಎಲ್ಲಿಡಬೇಕೋ ಅಲ್ಲಿಡುತ್ತಾರೆ. ಅವರೆಲ್ಲ ಗುಡಿ ಹೊರಗೆ ಇರುತ್ತಾರೆ. ಲಿಂಗಾಯತರಲ್ಲಿ ಒಗ್ಗಟ್ಟಿದ್ದರೆ ಹೀಗಾಗುತ್ತಿರಲಿಲ್ಲ. ಒಬ್ಬರಿಗೊಬ್ಬರು ಕಾಲೆಳೆದುಕೊಂಡೇ ಪರಿಸ್ಥಿತಿ ಹೀಗಾಗಿದೆ ಎಂದರು.
ನಾವು ಕಿಂಗ್ ಮೇಕರ್ ಅಲ್ಲ. ಕಿಂಗ್ ಆಗಲು ಹೊರಟಿದ್ದೇವೆ. ನಮ್ಮನ್ನು ಬಿಜೆಪಿಯವರು ಕಿಂಗ್ ಮೇಕರ್ ಮಾಡುತ್ತಾರೋ, ಕಾಂಗ್ರೆಸ್‌ನವರು ಕಿಂಗ್ ಮೇಕರ್ ಮಾಡುತ್ತಾರೋ ಗೊತ್ತಿಲ್ಲ. ಆದರೆ ಇವತ್ತಿನವರೆಗೆ ಇರುವ ರಾಜಕೀಯ ಲೆಕ್ಕಾಚಾರದ ಪ್ರಕಾರ 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂಬ ವಾತಾವರಣ ಇದೆ ಎಂದರು.