(ನ್ಯೂಸ್ ಕಡಬ) newskadaba.com ಕೇರಳ, ಫೆ.25. ಬಸ್ ಕ್ಷೇತ್ರದಲ್ಲಿ ಯುವ ಜನತೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ಕೇರಳದ ‘ಕೊಂಬನ್’ ಟ್ರಾವೆಲ್ಸ್ ಇನ್ಮುಂದೆ ಕರ್ನಾಟಕದಲ್ಲಿ ತನ್ನ ಸೇವೆಯನ್ನು ಮುಂದುವರಿಸಲಿದ್ದು, ಇದು ಕರ್ನಾಟಕದ ಬಸ್ ಪ್ರೇಮಿಗಳಲ್ಲಿ ಸಂತಸವನ್ನು ಉಂಟುಮಾಡಿದೆ.
ಬಸ್ಸಿನ ಮೂಲ ದರಕ್ಕಿಂತಲೂ ಹೆಚ್ಚಿನ ಹಣ ವ್ಯಯಿಸಿ ಸೌಂಡ್ಸ್ & ಲೈಟಿಂಗ್ಸ್ ನೊಂದಿಗೆ ತನ್ನದೇ ವಿಶಿಷ್ಟ ಶೈಲಿಯ ಪೈಂಟಿಂಗ್ ಮೂಲಕ ಯುವ ಜನತೆಯಲ್ಲಿ ಬಸ್ ಬಗ್ಗೆ ಹೊಸ ಕಲ್ಪನೆಯನ್ನು ಮೂಡಿಸಿದ್ದ ಕೊಂಬನ್ ಟ್ರಾವೆಲ್ಸ್ ಹುಟ್ಟಿಕೊಂಡಿರುವುದೇ ಒಂದು ರೋಚಕ ಕಥೆ. ಆನೆಯನ್ನು ಖರೀದಿಸಲೆಂದು ಕೇರಳದ ದೀಪು ಎಂಬವರು ಹೊರಟು ಮನೆಯವರ ವಿರೋಧವನ್ನು ಎದುರಿಸಬೇಕಾಗಿ ಬಂದಾಗ 2018ರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಿ ಕೊಂಬನ್ ಎಂಬ ಹೆಸರಿನೊಂದಿಗೆ ಯುವ ಜನತೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಸದ್ಯ ಐದು ಬಸ್ ಗಳನ್ನು ಹೊಂದಿರುವ ಕೊಂಬನ್ ಟ್ರಾವೆಲ್ಸ್ ಸಂಸ್ಥೆಯು ತನ್ನ ಒಂದೊಂದು ಬಸ್ಸನ್ನೂ ವಿಭಿನ್ನ ಹೆಸರಿನಲ್ಲಿ ಗುರುತಿಸಿಕೊಂಡಿದೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ಕೇರಳದಲ್ಲಿ ಟೂರಿಸ್ಟ್ ಬಸ್ ಗಳಿಗೆ ಜಾರಿಯಾದ ಕಲರ್ ಕೋಡ್ (ಬಿಳಿ ಬಣ್ಣ) ಗೆ ವಿರೋಧ ವ್ಯಕ್ತಪಡಿಸಿದ್ದ ಕೊಂಬನ್ ಟ್ರಾವೆಲ್ಸ್ ಮಾಲಿಕರು ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಬಸ್ಸನ್ನು ಮಾರಾಟ ಮಾಡುವುದಲ್ಲದೆ ಯಾವುದೇ ಕಾರಣಕ್ಕೂ ಬಣ್ಣ ಬದಲಾಯಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆ ನಂತರದ ದಿನಗಳಲ್ಲಿ ಕೊಂಬನ್ ಟ್ರಾವೆಲ್ಸ್ ನ ಯಾವುದೇ ಬಸ್ ಗಳು ರಸ್ತೆಗಿಳಿದಿರಲಿಲ್ಲ. ಕಳೆದೆರಡು ದಿನಗಳ ಹಿಂದೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದೀಪು, ಇನ್ಮುಂದೆ ತನ್ನ ಬಸ್ ಸಾಮ್ರಾಜ್ಯವನ್ನು ಕೇರಳದಿಂದ ಕರ್ನಾಟಕಕ್ಕೆ ಶಿಫ್ಟ್ ಮಾಡುವುದಾಗಿ ತಿಳಿಸಿದ್ದು, ಕೇರಳದ ಕಾನೂನಿಗೆ ಅನುಗುಣವಾಗಿ ಬೇರೆ ಬಸ್ ಖರೀದಿಸುವುದಾಗಿ ಹೇಳಿದ್ದಾರೆ. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಾರ್ಯಾಚರಿಸಲಿದೆ ಎಂದು ಮುಂದಿನ ಕೆಲವೇ ದಿನಗಳಲ್ಲಿ ತಿಳಿದುಬರಲಿದೆ.