(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.24. ಮಾರ್ಚ್ 1ರಂದು ಖಗೋಳದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದ್ದು, ಅಂದು ಶುಕ್ರ ಹಾಗೂ ಗುರು ಗ್ರಹದ ಜೊತೆಗೆ ಭೂಮಿಯ ಏಕೈಕ ಉಪಗ್ರಹ ಚಂದ್ರ ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಸೌರಮಂಡಲದ ಪ್ರಕಾಶಮಾನ ಗ್ರಹಗಳು ಎನಿಸಿಕೊಂಡಿರುವ ಶುಕ್ರ ಹಾಗೂ ಗುರು ಗ್ರಹಗಳು ಈಗಾಗಲೇ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿದ್ದು, ಗುರುವಾರದ ವೇಳೆಗೆ ಇವುಗಳ ಅಂತರ 9 ಡಿಗ್ರಿಯಷ್ಟು ತಲುಪಿದೆ.
ಇವುಗಳು ಸಾಮಾನ್ಯವಾಗಿ 29 ಡಿಗ್ರಿಗಳ ಅಂತರವನ್ನು ಹೊಂದಿದ್ದು, ಆದರೆ ಈಗ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿವೆ. ಫೆಬ್ರವರಿ 27ರ ವೇಳೆಗೆ ಇವುಗಳ ನಡುವಿನ ಅಂತರ 2.3 ಡಿಗ್ರಿಗೆ ತಲುಪಬಹುದು ಎಂದು ಖಗೋಳ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಮಾರ್ಚ್ 1ರ ವೇಳೆಗೆ ಮತ್ತಷ್ಟು ಸಮೀಪಿಸುವ ಮೂಲಕ ವಿಶೇಷ ವಿದ್ಯಮಾನ ಸಂಭವಿಸಲಿದೆ.