ಕಡಬ: ಆಪರೇಷನ್ ಎಲಿಫೆಂಟ್’ ವೇಳೆ ಅಧಿಕಾರಿಗಳಿಗೆ ಹಲ್ಲೆ ಹಿನ್ನೆಲೆ ➤ ಬಂಧಿತ ಆರೋಪಿಗಳ ವಿರುದ್ಧ ವಿವಿಧ ಕಲಂಗಳಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಫೆ.24. ನರ ಹಂತಕ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಗುರುವಾರ ರಾತ್ರಿ ಕೊಂಬಾರಿನ ಮಂಡೆಕರ ಬಳಿ ಪೊಲೀಸ್ ಹಾಗೂ ಅರಣ್ಯ ಇಲಾಖಾ ವಾಹನಗಳಿಗೆ ಹಾನಿ ಮಾಡಿದ ಆರೋಪದಲ್ಲಿ ಏಳು ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿಗಳಾದ ಉಮೇಶ್, ರಾಜೇಶ್, ಕೋಕಿಲಾನಂದ, ಕೋಲ್ಪೆ‌ ನಿವಾಸಿಗಳಾದ ಜನಾರ್ದನ್ ರೈ, ತೀರ್ಥಕುಮಾರ್, ಬಾರ್ಯ ನಿವಾಸಿ ಗಂಗಾಧರ್ ಗೌಡ, ರೆಂಜಾಳ ನಿವಾಸಿ ಅಜಿತ್‌ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗುರುವಾರ ರಾತ್ರಿ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾಡಾನೆಯು ಸೆರೆಸಿಕ್ಕಿದ್ದು ಅರಣ್ಯಾಧಿಕಾರಿಗಳು ದುಬಾರೆಗೆ ಕಳುಹಿಸಲು ಮುಂದಾದಾಗ ಕೆಲವು ಜನರು ಸ್ಥಳಕ್ಕೆ ಬಂದು ಕಾಡಾನೆ ತುಂಬಿಸಿದ ಲಾರಿಯನ್ನು ತಡೆದು ನಿಲ್ಲಿಸಿದ್ದರು. ಅಲ್ಲದೆ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲಾ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದರು. ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ನಾವು ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಹೇಳಿದರೂ ಆರೋಪಿಗಳು ಮಾತು ಕೇಳಿರಲಿಲ್ಲ. ಈ ವೇಳೆ ಅರಣ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಜನರಿಗೆ ತಿಳುವಳಿಕೆ ಹೇಳಿದ್ದರು. ಆದರೆ ಆರೋಪಿಗಳು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮತ್ತು ಅರಣ್ಯ ಸಿಬ್ಬಂದಿಗಳಿಗೆ ಕಲ್ಲು ತೂರಾಟ ಮಾಡಿದ್ದರು. ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖಾ ವಾಹನ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ cr. no.18/2023 ಕಲಂ: 143, 144,147, 148, 341, 353, 332, 307, 427, 504, 506 ಜೊತೆಗೆ 149 ಐ.ಪಿ.ಸಿ ಮತ್ತು ಕಲಂ: 2(ಬಿ),Karnataka Prevention of Distruction&loss Of Property Act-1981ರಂತೆ ಪ್ರಕರಣ ದಾಖಲಾಗಿರುತ್ತದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Also Read  ಅಂತ್ಯಕ್ರಿಯೆಗೆ ಹಣವಿಲ್ಲದೇ ತಾಯಿಯ ಮೃತದೇಹವನ್ನು ಮನೆಯಲ್ಲೇ ಬಚ್ಚಿಟ್ಟ ಮಗ..!

error: Content is protected !!
Scroll to Top