ಕಡಬದಲ್ಲಿ ಎರಡನೇ ದಿನವೂ ವಿಫಲಗೊಂಡ ‘ಆಪರೇಷನ್ ಎಲಿಫೆಂಟ್’

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಕಳೆದೆರಡು ದಿನಗಳಿಂದ ಕಡಬ ಪರಿಸರದ ಜನತೆಯನ್ನು ನಿದ್ದೆಗೆಡಿಸಿದ್ದ ಕಾಡಾನೆ ಸೆರೆಹಿಡಿಯುವ ಕಾರ್ಯವು ಎರಡನೇ ದಿನವೂ ವಿಫಲವಾಗಿದ್ದು, ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಕಡಬ ತಾಲೂಕಿನ ಮರ್ಧಾಳ ಸಮೀಪದ ನೈಲ ಎಂಬಲ್ಲಿ ಸೋಮವಾರ ಬೆಳಿಗ್ಗೆ ಎರಡು ಜೀವಗಳನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು 5 ಸಾಕಾನೆಗಳೊಂದಿಗೆ ನುರಿತ ತಂಡವು ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಫಲಪ್ರದವಾಗಿಲ್ಲ. ಮಂಗಳವಾರ ಬೆಳಿಗ್ಗೆ ನೈಲದಿಂದ ಉದನೆ ಸಮೀಪದ ಪುತ್ಯ ಎಂಬಲ್ಲಿಗೆ ಕಾರ್ಯಾಚರಣೆಯನ್ನು ಸ್ಥಳಾಂತರಿಸಲಾಗಿದ್ದು, ಬುಧವಾರ ಬೆಳಿಗ್ಗೆ ಕಾಡಾನೆಯು ಐತ್ತೂರು ಗ್ರಾಮದ ಸುಳ್ಯ ಸಮೀಪ ಆಜನ ಎಂಬಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸಂಜೆಯವರೆಗೆ ಆನೆಯನ್ನು ಹಿಡಿಯುವ ವಿಫಲ ಯತ್ನ ನಡೆಯಿತು. ಕ್ರೇನ್, ಹಿಟಾಚಿ, ನೀರಿನ ಟ್ಯಾಂಕರ್ ಸೇರಿದಂತೆ ಸಕಲ ಸಿದ್ಧತೆಗಳನ್ನು ಏರ್ಪಡಿಸಿದ್ದರಾದರೂ, ಆನೆಯು ನಿಂತಿದ್ದ ಸ್ಥಳವು ಪೊದರುಗಳಿಂದ ಕೂಡಿದ್ದರಿಂದ ಕೊನೆಯ ಕ್ಷಣದಲ್ಲಿ ಅರಿವಳಿಕೆ ಚುಚ್ಚುಮದ್ದು ಗುರಿ ತಪ್ಪಿದ ಕಾರಣ ಕಾರ್ಯಾಚರಣೆ ವಿಫಲಗೊಂಡಿದೆ.

Also Read  ಶಾಸಕರ ಅನುದಾನ ಬಿಡುಗಡೆ

ನುರಿತ ವೈದ್ಯರ ತಂಡವು ಸ್ಥಳದಲ್ಲಿದ್ದು, ಸಂಜೆ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಗುರುವಾರ ಮತ್ತೆ ಮುಂದುವರಿಯಲಿದೆ‌. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡವು ಡ್ರೋನ್ ಬಳಸಿ ಕಾಡಾನೆಯ ಚಲನವಲನಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ.ಕೆ. ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ, ಎನ್.ಮಂಜುನಾಥ್, ಆರ್.ಗಿರೀಶ್ ಅವರು ಸ್ಥಳದಲ್ಲಿದ್ದು, ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ‌.

Also Read  ಈರುಳ್ಳಿ ಬೆಲೆ ಏರಿಕೆ, ಕಡಿಮೆ ಆಯ್ತು ಬಳಕೆ ➤ ಖರೀದಿಗೆ ಗ್ರಾಹಕರು ಹಿಂದೇಟು!

error: Content is protected !!
Scroll to Top