(ನ್ಯೂಸ್ ಕಡಬ) newskadaba.com. ಚೆನ್ನೈ. ಫೆ.21. ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 2000 ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 55 ವರ್ಷ ಪ್ರಾಯದ ಮಧುಮೇಹ ಕಾಯಿಲೆಯನ್ನು ಹೊಂದಿರುವ ಮಹಿಳೆಯೊಬ್ಬರು ಚೆನ್ನೈನಲ್ಲಿರುವ ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆ ಬಂದಿದ್ದರು, ಗ್ಯಾಸ್ಟಿಕ್ ಹಾಗೂ ಅಜೀರ್ಣದ ಸಮಸ್ಯೆಯ ಕಾರಣ ಹೇಳಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಸ್ಕ್ಯಾನಿಂಗ್ ಮಾಡಿದಾಗ ಮೊದಲಿಗೆ ಅವರ ಪಿತ್ತಕೋಶದಲ್ಲಿ 50ಕ್ಕೂ ಹೆಚ್ಚು ಕಲ್ಲುಗಳಿರುವುದು ಕಂಡು ಬಂತು.
ಇದಾದ ನಂತರ ಆಸ್ಪತ್ರೆಯ ವೈದ್ಯರ ತಂಡ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ತೆಗೆದು ಹಾಕಲು ನಿರ್ಧರಿಸಿದರು. ಆದರೆ ಈ ಪ್ರಕ್ರಿಯೆ ವೇಳೆ ಅವರಿಗೆ , ಮಹಿಳೆಯ ಪಿತ್ತಕೋಶದಲ್ಲಿ 2,000 ಕ್ಕೂ ಹೆಚ್ಚು ಕಲ್ಲುಗಳು ಕಂಡು ಬಂದಿದ್ದು, ಇದನ್ನು ನೋಡಿ ವೈದ್ಯರೇ ಒಂದು ಕ್ಷಣ ದಂಗಾಗಿದ್ದರು. ಈ 2 ಸಾವಿರ ಕಲ್ಲುಗಳಲ್ಲಿ 2 ಎಂಎಂಗಿಂತ ದೊಡ್ಡದಾದ 1,240 ಕಲ್ಲುಗಳಿದ್ದವು. ಉಳಿದ ಕಲ್ಲುಗಳು ಈ ಗಾತ್ರಕ್ಕಿಂತ ಚಿಕ್ಕದಾಗಿದ್ದವು.