ಕಡಬ: ಕಾಡಾನೆ ದಾಳಿಗೆ ಬಲಿಯಾದವರಿಗೆ 15 ಲಕ್ಷ ರೂ. ಪರಿಹಾರ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಫೆ.20. ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿಯಾಗಿರುವ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಸಮೀಪದ ಮೀನಾಡಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(23) ಎಂಬಾಕೆ ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ಮಾಡಿದೆ. ಇದೇ ವೇಳೆ, ಅಲ್ಲೇ ಇದ್ದ ಸ್ಥಳೀಯ ನಿವಾಸಿ ರಮೇಶ್ ರೈ(55) ಎಂಬವರ ಮೇಲೂ ಆನೆ ತನ್ನ ಅಟ್ಟಹಾಸವನ್ನು ಮೆರೆದಿದೆ. ಗಂಭೀರ ಗಾಯಗೊಂಡಿದ್ದ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಂಜಿತಾ ಅವರು ನೆಲ್ಯಾಡಿ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಕೊನೆಯುಸಿರು ಎಳೆದಿರುವುದಾಗಿ ತಿಳಿದು ಬಂದಿದೆ. ರಮೇಶ್​ ಮತ್ತು ರಂಜಿತಾ ದೇಹಗಳು ಆನೆ ದಾಳಿಯಿಂದ ವಿರೂಪಗೊಂಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು. ಜಿಲ್ಲಾಧಿಕಾರಿ ಮತ್ತು ಸಚಿವರು ಬರುವವರೆಗೆ ಮೃತ ದೇಹಗಳನ್ನು ತೆಗೆಯುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದ ವಿಷಯ ತಿಳಿದು ಡಿಎಫ್ಒ ಡಾ. ವೈ.ಕೆ. ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸಂಜೆಯೊಳಗಡೆ ಆನೆಗಳನ್ನು ಹಿಡಿಯುವ ವ್ಯವಸ್ಥೆ ಮಾಡುತ್ತೇವೆ. ನಾಗರಹೊಳೆ, ದುಬಾರೆ ಆನೆ ಕ್ಯಾಂಪಿನಿಂದ ಪಳಗಿದ ಆನೆಗಳನ್ನು ತಂದು ಕಾಡಾನೆ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ, ಸ್ಥಳೀಯರು ಭರವಸೆ ಬೇಡ ಲಿಖಿತವಾಗಿ ಬರೆದುಕೊಡಿ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವಿ ಕುಮಾರ್, ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಮೃತ ರಂಜಿತಾಳ ಸಹೋದರಿಗೆ ಉದ್ಯೋಗದ ಭರವಸೆ ನೀಡಿದರಲ್ಲದೆ, ಇಂದಿನಿಂದಲೇ ಆನೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಸಂಜೆ ವೇಳೆಗೆ ಆಗಮಿಸಿದ ಸಚಿವ ಎಸ್.ಅಂಗಾರ ಮಾಹಿತಿ ಪಡೆದುಕೊಂಡರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

error: Content is protected !!

Join the Group

Join WhatsApp Group