(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ನಗರದ ಅರಮನೆ ಮೈದಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 3 ಕಾರುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಅರಮನೆ ಮೈದಾನದಲ್ಲಿರುವ ಕಿಂಗ್ಸ್ ಕೋರ್ಟ್‌ಗೆ ಹೊಂದಿಕೊಂಡಿರುವ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ತ್ಯಾಜ್ಯ ವಸ್ತುಗಳು ಮತ್ತು ಒಣ ಎಲೆಗಳು ಇದ್ದ ಜಾಗದಲ್ಲಿ ಬೆಂಕಿ ಹೊತ್ತಿದ್ದು, ಬಳಿಕ ಬೆಂಕಿ ಮೂರು ಕಾರುಗಳಿಗೆ ವ್ಯಾಪಿಸಿದೆ.ಇನ್ನು ಇಲ್ಲಿ ಯಾರೋ ಸೇದಿ ಬಿಸಾಡಿ ಹೋದ ಸಿಗರೇಟ್ ತುಂಡಿನಿಂದ ಒಣ ತ್ಯಾಜ್ಯಕ್ಕೆ ಬೆಂಕಿ ಹೊತ್ತಿದ್ದು, ಅದು ಕಾರುಗಳಿಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. ಆದರೂ ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ.