(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.25. ರಾತ್ರಿ ರಸ್ತೆ ಮಧ್ಯೆ ಕಾರಿನ ಟಯರ್ ಪಂಕ್ಚರ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾಗುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾನವೀಯತೆ ಮೆರೆದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರಿನ ಪ್ರವಾಸಿಗರಿದ್ದ ಕಾರೊಂದು ಚಿಕ್ಕಮಗಳೂರು-ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಮತ್ತಾವರ ಎಂಬ ಕಾಡು ಪ್ರದೇಶಕ್ಕೆ ತಲುಪಿದಾಗ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಜನಸಂಖ್ಯೆ ಇರದೆ ಇದ್ದುದರಿಂದ ಪ್ರವಾಸಿಗರು ತುಂಬಾ ಆತಂಕಕ್ಕೆ ಒಳಗಾಗಿದ್ದರು. ಅಷ್ಟರಲ್ಲಿ ಆ ದಾರಿಯಾಗಿ ಕೊಪ್ಪದಿಂದ ಚಿಕ್ಕಮಗಳೂರಿಗೆ ಎಸ್ಪಿಅಣ್ಣಾಮಲೈ ಆಗಮಿಸಿದ್ದಾರೆ. ಪ್ರವಾಸಿಗರ ಸಮಸ್ಯೆ ಅರಿತ ಅವರು ತಾವೇ ಸ್ವತಃ ಸಹಾಯಕ್ಕಿಳಿದರು. ಸ್ಪಾನರ್ ಹಿಡಿದು ಪಂಕ್ಚರ್ ಆಗಿರುವ ಕಾರಿನ ಟಯರ್ ಅನ್ನು ಬಿಚ್ಚಲು ಯತ್ನಿಸಿದರು. ಅದು ಸಾಧ್ಯವಾಗದಾಗ ಪ್ರವಾಸಿಗರನ್ನು ತಮ್ಮ ಕಾರಿನಲ್ಲೇ ನಗರಕ್ಕೆ ತಂದು ಬಿಟ್ಟರು. ಎಸ್ಪಿ ಅಣ್ಣಾಮಲೈಯವರ ಈ ಸೇವೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.