ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ಮಲೇಷ್ಯಾ ಮರಳು ವಿತರಣೆ: ರಾಜೇಂದ್ರ ಕುಮಾರ್ ► ಕಡಬ ಸಿ.ಎ.ಬ್ಯಾಂಕ್ ನೂತನ ಕಟ್ಟಡ ‘ಯೋಗಕ್ಷೇಮ’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.24. ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಂಡು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೂಲಕ ಜನಸಾಮಾನ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ಭಾನುವಾರದಂದು ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸುಮಾರು ಎರಡು ಕೋಟಿ ರೂ. ವೆಚ್ಚದ ಸುಸಜ್ಜಿತ ನೂತನ ಕಟ್ಟಡ ‘ಯೋಗ ಕ್ಷೇಮ’ ಸಹಕಾರಿ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಸರಕಾರದ ಈಗಿನ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಅಭಾವ ತಲೆದೋರಿದೆ. ಹೊಸ ವರ್ಷಕ್ಕೆ ನೂತನ ಮರಳು ನೀತಿ ಜಾರಿಯಾಗುವ ಮಾತು ಕೇಳಿ ಬರುತ್ತಿದ್ದು,  ನಾವು ನಮ್ಮ ಬ್ಯಾಂಕಿನ ಮುಖಾಂತರ ಮಲೇಶ್ಯಾದಿಂದ ಮರಳು ಆಮದು ಮಾಡಿಕೊಂಡು ಜಿಲ್ಲೆಯ ಜನಸಾಮಾನ್ಯರಿಗೆ ಮಿತ ದರದಲ್ಲಿ ವಿತರಿಸಲು ನಿರ್ಧರಿಸಿದ್ದೇವೆ. ನಾವು ಈಗಾಗಲೇ 84 ಲಕ್ಷ ಟನ್ ಯೂರಿಯಾವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ, ನಮ್ಮಲ್ಲಿ ಈಗ ನಾಲ್ಕರಿಂದ ಐದು ಲಕ್ಷ ಟನ್ ಯೂರಿಯಾ ಉತ್ಪತ್ತಿಯಾಗುತ್ತಿದೆ, ನಮ್ಮಲ್ಲಿ  ಬೇಡಿಕೆ 18 ಲಕ್ಷ ಟನ್ಗಿಂತಲೂ ಅಧಿಕವಾಗಿದೆ ಈ ಹಿನ್ನೆಯಲ್ಲಿ ಗ್ಯಾಸ್ ಆಧಾರಿತ ಸುಲಭ ಖರ್ಚಿನ ಯೂರಿಯಾವನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಬ್ಯಾಂಕಿನ ವತಿಯಿಂದ ತಯಾರಿಸಲಾಗುವುದು, ಅದೇ ರೀತಿ ವಿದೇಶಿ  ತಂತ್ರಜ್ಞಾನ ಬಳಸಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಿ ಕಸದಿಂದ ರಸ ತೆಗೆಯುವ ಕಾರ್ಯ ಮಾಡಲಾಗುದು, ನಮ್ಮಲ್ಲಿನ ರೈತ ಬೆಳೆಯುವ ವಾಣಿಜ್ಯ ಬೆಳೆಗಳ ಬೆಲೆ ಪಾತಾಳಕ್ಕೆ ಇಳಿದಿರುವುದರಿಂದ ಅದಕ್ಕೆ ಬೆಂಬಲ ಬೆಲೆ ದೊರೆಯಬೇಕು ಎನ್ನುವ ಉದ್ದೇಶದಿಂದ ಕೆಂದ್ರದಿಂದ 1.65 ಲಕ್ಷ ಟನ್ ತೊಗರಿ ಬೇಳೆ ಹಾಗೂ ರಾಗಿ, ಜೋಳಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು. ಆ ಮೂಲಕ ರೈತರ ಅಭ್ಯುದಯಕ್ಕೆ ಪ್ರೇರಣೆ ನೀಡಲಾಗುವುದು ಎಂದು ಹೇಳಿದ ರಾಜೇಂದ್ರ ಕುಮಾರ್ ಜಿಲ್ಲೆಯಲ್ಲಿ ಸಹಕಾರಿ ಸಂಘಗಳಲ್ಲಿ ಸದಸ್ಯರು ಮಾಡಿರುವ ಸಾಲವನ್ನು ಶೇ 100 ರಷ್ಟು ಮರು ಪಾವತಿ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಕಡಬ ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಪ್ರಾಮಾಣಿಕ ಸೇವೆಯ ಮೂಲಕ ಸದಸ್ಯರ ಹಾಗೂ ಇಲ್ಲಿನ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದಲ್ಲದೆ, ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿ ಕಡಬ ತಾಲೂಕಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರು.

ಆಡಳಿತ ಸಭಾಭವನವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತಾಪಿ ವರ್ಗದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ, ಇಂದು ರೈತರು ಆರ್ಥಿಕವಾಗಿ ಸ್ವಾಲಂಬಿಗಳಾಗಿ ನೆಮ್ಮದಿಯ ಬದುಕು ಕಾಣಲು ಸಹಕಾರಿ ಸಂಘಗಳೇ ಪ್ರಮುಖ ಕಾರಣ, ಗ್ರಾಮೀಣ ಭಾಗದ ಅಭಿವೃದ್ಧಿಯ ಮುಖಾಂತರ ದೇಶದ ಅಭಿವೃದ್ಧಿಗೆ ಕಾರಣವಾಗಿರುವ ಸಹಕಾರಿ ಕ್ಷೇತ್ರ ಇನ್ನಷ್ಟು ಬಲಗೊಳ್ಳಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಎಸ್,ಅಂಗಾರ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಅಧಿಕಾರದ ಭಾವನೆಯಿಂದ ದುಡಿಯದೆ ಸೇವಾ ಮನೋಭಾವನೆ ಹಾಗೂ ಹೊಣೆಗಾರಿಕೆಯಿಂದ ದುಡಿದಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ನಿರ್ದಿಷ್ಟವಾದ ಗುರಿ, ಯೋಜನೆ ಹಾಗೂ ಸ್ಪಷ್ಟವಾದ ನಿರ್ಧಾರಗಳಿಂದ ಸಹಕಾರಿ ಸಂಘಗಳಲ್ಲಿ ಆಡಳಿತ ನಡೆಸಿದಾಗ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ಕಂಡ ಕನಸು ಸಾಕಾರಗೊಳ್ಳುತ್ತದೆ. ಕಡಬ ಪ್ರಾ.ಕೃ.ಪ.ಸ ಸಂಘದ ಆಡಳಿತ ಮಂಡಳಿಯ ಕಾರ್ಯಶೈಲಿ ಇದಕ್ಕೆ ಪೂರಕವಾಗಿದೆ ಎಂದರು. ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್, ಲಾಕರ್ ನ ಪ್ರಥಮ ಕೀಯನ್ನು ವೆಂಕಟ್ ರಾಜ್ ಕೋಡಿಬೈಲು ಅವರಿಗೆ ಹಸ್ತಾಂತರಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಗೋದಾಮು ಕಟ್ಟಡವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹಾಗೂ ಸಹಕಾರ ಭಾರತೀಯ ರಾಜ್ಯ ಸಹಸಂಘಟನಾ ಪ್ರಮುಖ ಹರೀಶ್ ಆಚಾರ್ ಮಾತನಾಡಿ ಶುಭ ಹಾರೈಸಿದರು.

ಪುತ್ತೂರು ಪಿಎಲ್.ಡಿ ಬ್ಯಾಂಕ್ ಅದ್ಯಕ್ಷ ಎ.ಬಿ.ಮನೋಹರ ರೈ, ತಾಲೂಕು ಪಂಚಾಯತಿ ಸದಸ್ಯರಾದ ಗಣೇಶ್ ಕೈಕುರೆ, ಪಿ.ವೈ.ಕುಸುಮಾ, ಎ.ಪಿ.ಎಂ.ಸಿ ನಿಧೇಶಕರಾದ ಪುಲಸ್ತ್ಯಾ ರೈ, ಮೇದಪ್ಪ ಗೌಡ ಡೆಪ್ಪುಣಿ, ಸಂಘದ ನಿರ್ದೇಶಕರಾದ ಪುವಪ್ಪ ಗೌಡ ಐತ್ತೂರು, ನಿತ್ಯಾನಂದ ಗೌಡ ಬೊಳ್ಳಾಜೆ, ರಘುಚಂದ್ರ ಕೆ, ಸುದರ್ಶನ ಗೌಡ ಕೋಡಿಂಬಾಳ, ರಾಜೀವಿ, ಲೀಲಾವತಿ, ಅಂಗಜ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ವಸಂತ್ ಎಸ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಹಿರಿಯ ನಾಗರಿಕ ರಾಜರತ್ನ ಆರಿಗ ಸನ್ಮಾನಿಸಿದರು. ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ ರಾಜೇಂದ್ರಕುಮಾರ್ ಅವರ ಪರಿಚಯ ಮಾಡಿದರು. ಇದೇ ವೇಳೆ ಕಟ್ಟಡ ನಿರ್ಮಾಣದ ಇಂಜಿನಿಯರ್ ಸುರೇಶ್ ಕುಮಾರ್ ಪಣೆಮಜಲು, ಗುತ್ತಿಗೆದಾರ ಪ್ರಸಾದ್ ಕೆ.ಎನ್, ಸಹಗುತ್ತಿಗೆದಾರ ನಾಗೇಶ್ ಕೋಡಿಂಬಾಳ ಅವರನ್ನು ಸನ್ಮಾನಿಸಿಲಾಯಿತು. ಈ ಹಿಂದೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅಧ್ಯಕ್ಷರನ್ನು ಗೌರವಿಸಲಾಯಿತು. ತನುಜಾ ಶಿವಾನಂದ ಕಾರಂತ್ ಪ್ರಾರ್ಥಿಸಿದರು. ದೀಪ್ತಿ, ಧೃತಿ ಹಾಗೂ ಭವಿತಾ ರೈತ ಗೀತೆ ಹಾಡಿದರು.

ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಪ್ರಸ್ತಾವನೆಗೈದು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾಕೋ ಸಂಘ ಬೆಳೆದು ಬಂದ ಪಕ್ಷಿನೋಟವನ್ನು ಸಭೆಯ ಮುಂದಿಟ್ಟರು. ಸಂಘದ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ ವಂದಿಸಿದರು. ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಹಾಗೂ ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group