(ನ್ಯೂಸ್ ಕಡಬ)newskadaba. ಚಾಮರಾಜನಗರ,ಫೆ.06. ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ ಶುರುವಾಗಿದೆ. ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತರು ರಾತ್ರಿ ವಿಶ್ರಾಂತಿಗಾಗಿ ಮಲಗಿದ್ದಾಗ ಹಂದಿ ದಾಳಿ ನಡೆಸಿದೆ. ಆಹಾರಕ್ಕಾಗಿ ಮನುಷ್ಯರ ಮೇಲೆ ಹಂದಿಗಳು ದಾಳಿ ನಡೆಸಿದ್ದು ತಮಿಳುನಾಡು ಮೂಲದ ಭಕ್ತನಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಬಂಧ ಭಕ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಹಂದಿ ದಾಳಿಗೆ ತಮಿಳಿನಾಡು ಮೂಲದ ಭಕ್ತರೊಬ್ಬರು ಗಾಯಗೊಂಡಿದ್ದು, ಕಳೆದ ವರ್ಷ ಕೂಡ ಇದೇ ರೀತಿ ಹಂದಿಗಳು ನಾಲ್ಕು ವರ್ಷದ ಬಾಲಕಿಯನ್ನು ತಿವಿದು ಗಾಯಗೊಳಿಸಿದ್ದವು. ಹಂದಿಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಮಾತ್ರವಲ್ಲದೆ, ಅವರ ಬಳಿ ಇರುವ ಆಹಾರ ಮತ್ತಿತರ ವಸ್ತುಗಳನ್ನು ಎಳೆದು ಹಾಳು ಮಾಡುತ್ತಿವೆ. ಸಮಸ್ಯೆಯ ಗಂಭೀರತೆ ಅರಿವಿದ್ದರೂ ಹಂದಿ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಭಕ್ತರು ಮತ್ತು ಊರಿನವರು ಆಕ್ರೋಶ ಹೊರಹಾಕಿದ್ದಾರೆ.