(ನ್ಯೂಸ್ ಕಡಬ)newskadaba.com ನವದೆಹಲಿ, ಫೆ. 06. ಖ್ಯಾತ ಸಂಗೀತ ಸಂಯೋಜಕ ಬೆಂಗಳೂರಿನ ರಿಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡಿವೈನ್ ಟೈಡ್ಸ್ ಎಂಬ ಆಲ್ಬಂ ಬೆಸ್ಟ್ ಇಮ್ಮರ್ಸೀವ್ ಆಡಿಯೋ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದು, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು, ಈ ಸಾಧನೆಯೊಂದಿಗೆ, ರಿಕಿ ಕೇಜ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯರು ಎನಿಸಿಕೊಂಡಿದ್ದಾರೆ.
ತಮ್ಮ ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ, ರಿಕಿ ಕೇಜ್ ಪ್ರಶಸ್ತಿ ಪುರಸ್ಕೃತರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಟ್ವೀಟ್ ಮಾಡಿದ ರಿಕಿ ಕೇಜ್, ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕವಿಸ್ಮಿತನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ ಎಂದೂ ರಿಕಿ ಕೇಜ್ ಬರೆದುಕೊಂಡಿದ್ದಾರೆ.