(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ವಿವಿ ಕಡೆಯಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ಸಿಕ್ಕರೂ ಕೂಡ ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಜತೆಗೆ ಶುಲ್ಕ ಹಾಗೂ ಸಮಯ ಎರಡನ್ನೂ ಕಳೆದುಕೊಳ್ಳಲಿದ್ದಾರೆ.
ಮಂಗಳೂರು ವಿವಿ ಪರೀಕ್ಷೆ ಜತೆಗೆ ಫಲಿತಾಂಶ ನೀಡುವುದರಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಸುದ್ದಿಯಲ್ಲಿದೆ. ವಿದ್ಯಾರ್ಥಿಗಳ ಪ್ರತಿಭಟನೆ, ಪ್ರಿನ್ಸಿಪಾಲರ ಮನವಿಗಳೆಲ್ಲವೂ ವಿವಿ ಅಧಿಕಾರಿಗಳ ಕದ ಬಡಿದರೂ ಸುಧಾರಣೆಯಾಗುವ ಲಕ್ಷಣ ಗೋಚರವಾಗುತ್ತಿಲ್ಲ. ಬದಲಾಗಿ ವಿವಿ ಪರೀಕ್ಷಾ ವಿಭಾಗ ಸಂಪೂರ್ಣ ಗೊಂದಲಕ್ಕೆ ಸಿಲುಕಿ ವಿದ್ಯಾರ್ಥಿಗಳನ್ನು ತ್ರಿಶಂಕು ಸ್ಥಿತಿಗೆ ತಂದಿದೆ. ಮಂಗಳೂರು ವಿವಿ ತಪ್ಪನ್ನು ಪುನರಾರ್ವತಿಸಿದೆ.