ಹತ್ತು ದಿನಗಳ ಕಾಲ‌ ನಡೆಯಲಿರುವ ಕರಾವಳಿ ಉತ್ಸವಕ್ಕೆ ಇಂದು ಚಾಲನೆ ► ಉತ್ಸವದ ವಿಶೇಷ ಆಕರ್ಷಣೆಯಾಗಿ ‘ಬೃಹತ್ ಸಾಂಸ್ಕೃತಿಕ ಮೆರವಣಿಗೆ’

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಇಂದಿನಿಂದ ಡಿಸೆಂಬರ್ 31 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಕರಾವಳಿ ಉತ್ಸವವನ್ನು ಇಂದು ಸಂಜೆ 6 ಗಂಟೆಗೆ ಬಹುಭಾಷಾ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.

ಇಂದು ಸಂಜೆ 3.30 ರಿಂದ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಬೃಹತ್ ಸಾಂಸ್ಕತಿಕ ಮೆರವಣಿಗೆ ನಡೆಯಲಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ವೈವಿಧ್ಯಮಯವಾದ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 80ಕ್ಕೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು, ವಿಶೇಷವಾಗಿ ಮಹಿಳಾ ವೀರಗಾಸೆ, ಚಿಕ್ಕ ಮಂಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರ ಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿಇನದನ ತಂಡಗಳಲ್ಲದೆ ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಮೊದಲ್ಗೊಂಡು ತುಳುನಾಡಿನ ಜನಪದ ಕುಣಿತ, ಯಕ್ಷಗಾನ ವೇಷಗಳು, ಸೋಣ ಜೋಗಿ ಕುಣಿತ ಹುಲಿವೇಷ, ತಾಲೀಮು, ಶಂಖ ದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ ಮರಕಾಲು ಹುಲಿ ವೇಷ, ಇತ್ಯಾದಿ ಆಕರ್ಷಕ ಪ್ರದರ್ಶನಗಳು ನಡೆಯಲಿವೆ. ಬೆಡಿ ಗರ್ನಲ್, ಸಹಿತವಾಗಿ ವಿವಿಧ ದೇವಸ್ಥಾನಗಳಿಂದ ಸಾಂಪ್ರದಾಯಿಕ ವಾದನದೊಂದಿಗೆ ತಟ್ಟೀರಾಯ, ಬೇತಾಳ ಮೆರವಣಿಗೆಗೆ ಮೆರುಗು ನೀಡಲಿದೆ. ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‍ಸಿಸಿ, ಸ್ಕೌಟ್ಸ್ ಗೈಡ್ಸ್ ಭಾರತ ಸೇವಾದಲ, ಮೊದಲಾದ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಾಥ್ ನೀಡಲಿವೆ. ವಿವಿಧ ಕಾಲೇಜುಗಳ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Also Read  ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ..!

ಸಂಜೆ 5.30 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ‘ವಸ್ತು ಪ್ರದರ್ಶನವನ್ನು’ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪದ ಹೊರ ಆವರಣದ ಮೈದಾನದಲ್ಲಿ 5.30 ರಿಂದ 7 ರವರೆಗೆ ವಿವಿಧ ಜಿಲ್ಲೆಗಳಿಂದ ಬಂದ ಕಲಾ ತಂಡಗಳು ವಿಶೇಷ ಪ್ರದರ್ಶನವನ್ನು ನೀಡಲಿವೆ‌.

Also Read  ರುಡ್ ಸೆಟ್ ಸಂಸ್ಥೆ, ಉಜಿರೆ ಇದರ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ

ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಪ್ಪಿಟ್ಟು, ಅವಲಕ್ಕಿ, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು (ಸಣ್ಣ ಬಾಟಲ್‍ಗಳಲ್ಲಿ), ಮೆರವಣಿಗೆಯ ನಂತರ ಕರಾವಳಿ ಉತ್ಸವ ಮೈದಾನದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಕರಾವಳಿ ಉತ್ಸವ ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

error: Content is protected !!
Scroll to Top