(ನ್ಯೂಸ್ ಕಡಬ) newskadaba.com ಉಡುಪಿ, ಡಿ.22. ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಗಂಭೀರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಉಡುಪಿಯಿಂದ ಬೆಂಗಳೂರಿಗೆ ರವಾನೆ ಮಾಡಲಾದ ಘಟನೆ ಗುರುವಾರದಂದು ನಡೆದಿದೆ.
ಲಿವರ್ ಸಮಸ್ಯೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಉಡುಪಿಯ ಬೈಂದೂರು ತಾಲೂಕಿನ ಅರೆಶಿರೂರು ಗ್ರಾಮದ ಆರನೇ ತರಗತಿ ವಿದ್ಯಾರ್ಥಿನಿ ಅನುಶಾಳನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ಉಡುಪಿ – ಮಂಗಳೂರು ಮಾರ್ಗವಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ರಾಜ್ಯದ ಅತೀ ದೊಡ್ಡ ಝೀರೋ ಟ್ರಾಫಿಕ್ ವ್ಯವಸ್ಥೆಯೆನ್ನಲಾದ ಸುಮಾರು 140 ಕಿಲೋ ಮೀಟರ್ ದೂರದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಒಂದು ಹೈವೇ ಪೊಲೀಸ್ ಪ್ಯಾಟ್ರಲ್ ವಾಹನ ಮತ್ತು ಆಂಬುಲೆನ್ಸ್ ಅತೀ ವೇಗದಲ್ಲಿ ಮಂಗಳೂರಿನ ಬಜ್ಪೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ 1 ಗಂಟೆಯ ಜೆಟ್ ಏರ್ ವೇಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ಕರೆತರಲಾಗಿದ್ದು, ತಕ್ಷಣವೇ ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಆಪರೇಷನ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಕಾರ್ಮಿಕ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಅನಾರೋಗ್ಯ ಪೀಡಿತೆಯನ್ನು ಬೆಂಗಳೂರಿಗೆ ರವಾನೆ ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು.