(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.02. ಪಡಿತರ ಅಂಗಡಿ ಮೂಲಕ ನೀಡಲಾಗುತ್ತಿರುವ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿ ಕಾಳು ಮಿಶ್ರಣವಾಗಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬುತ್ತಿದೆ. ಆದರೆ ವಾಸ್ತವವಾಗಿ ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಸಾರವರ್ಧಿತ ಅಕ್ಕಿ !
ದ.ಕ.ಜಿಲ್ಲೆಯಲ್ಲಿ ಜನವರಿಯ ಅಕ್ಕಿ ವಿತರಣೆ ಆಗುತ್ತಿದ್ದಂತೆ ಅದರಲ್ಲಿ ಕಂಡು ಬಂದಿರುವ ದೊಡ್ಡ ಗಾತ್ರದ ಬಿಳಿ ಬಣ್ಣದ ಅಕ್ಕಿಯನ್ನು ಕಂಡು ಪಡಿತರ ಅಕ್ಕಿಗೆ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಆಹಾರ ಇಲಾಖೆ, ಗ್ರಾ.ಪಂ.ಗಳಿಗೆ ದೂರು ಹೇಳುತ್ತಿರುವ ಪ್ರಸಂಗ ಕಂಡು ಬರುತ್ತಿದೆ. ಕೇಂದ್ರ ಸರಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆಜಿ ಅಕ್ಕಿಗೆ ನಿಗದಿತ ಪ್ರಮಾಣದ ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಇದರಲ್ಲಿ ಕಬ್ಬಿಣದ ಅಂಶ, ಫೋಲಿಕ್ ಆಮ್ಲ, ಹಾಗೂ ಬಿ ವಿಟಮಿನ್ ಅಂಶಗಳಿವೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತೀ ವ್ಯಕ್ತಿಗೆ ನೀಡುವ 10 ಕೆಜಿ ಅಕ್ಕಿಯಲ್ಲಿ 5 ಕೆ.ಜಿ ಸಾರವರ್ಧಿತ ಮಿಶ್ರಿತ ಅಕ್ಕಿ ಹಾಗೂ 5 ಕೆ.ಜಿ ಸಾದಾ ಅಕ್ಕಿಯನ್ನು ನೀಡುವಂತೆ ಸರಕಾರದ ಮಾರ್ಗಸೂಚಿ ಇದೆ. ಪ್ರತೀ ಫಲಾನುಭವಿಗೆ ಸಾದಾ ಅಕ್ಕಿ ಹಾಗೂ ಸಾರವರ್ಧಿತ ಅಕ್ಕಿಯನ್ನು ಪ್ರತ್ಯೇಕವಾಗಿ ನೀಡಬೇಕು ಅನ್ನುವ ನಿಯಮ ಇದೆ.