ನೀವು ವಾಹನಗಳಿಗೆ ಪೆಟ್ರೋಲ್, ಡೀಸೆಲ್‌ ತುಂಬಿಸುತ್ತೀರಾ…? ► ಹಾಗಾದರೆ ಮೋಸ ಹೋಗುವ ಮುನ್ನ ಇದನ್ನೊಮ್ಮೆ ಓದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಂದಾಗಿ ಕೆಲವು ವಾಹನ ಮಾಲಕರು ಪೆಟ್ರೋಲ್, ಡೀಸೆಲ್‌ ಸುರಿದು ಕೈಸುಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಕೆಲವು ಪೆಟ್ರೋಲ್ ಬಂಕ್ ಮಾಲಕರು ಮಾತ್ರ ಲಾಟರಿ ಹೊಡೆಯಲು ಆರಂಭಿಸಿದ್ದಾರೆ.

ಇನ್ನೊಂದೆಡೆ ಸರ್ಕಾರವು ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ದರಗಳ ಟ್ಯಾಕ್ಸ್ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯನ್ನಾಗಿಸಿದೆ. ಇಂಧನ ದರಗಳು ಹೆಚ್ಚಾದಂತೆ ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುವ ಮೋಸಗಳಿಂದ ಬೇರೊಂದು ರೀತಿಯಲ್ಲಿ ನಮ್ಮ ಮೇಲೆ ಹೊರೆ ಬೀಳುತ್ತಿದೆ. ಬಂಕ್ ಗಳಲ್ಲಿ ಮೋಸದಿಂದ ಪೆಟ್ರೋಲ್ ಅನ್ನು ಕಡಿಮೆ ತುಂಬಿಸುತ್ತಾರೆ.

1) ಗಮನ ಬೇರೆಡೆಗೆ ಸೆಳೆಯುವುದು: ಪೆಟ್ರೋಲ್ ಅಥವಾ ಡೀಸಲ್ ತುಂಬುವ ಮೊದಲು ರೀಡಿಂಗ್ ಅನ್ನು ಸೊನ್ನೆ ಮಾಡುತ್ತಾರೆ. ನಮ್ಮ ಮುಂದೆ ಮಾತ್ರ ರೀಡಿಂಗ್ ಸೊನ್ನೆ ಮಾಡಿ ಸ್ವಲ್ಪ ಇಂಧನ ತುಂಬಿಸಿದ ನಂತರ ನಮ್ಮನ್ನು ಸಾವಧಾನದಿಂದ ಮಾತನಾಡುತ್ತಾ ರೀಡಿಂಗ್ ಬದಲಾಯಿಸುವುದು ಇಲ್ಲವೇ ಕಡಿಮೆ ಇಂಧನವನ್ನು ತುಂಬುವುದು ಮಾಡುತ್ತಾರೆ. ಇದರಿಂದ ನಾವು ಕೇಳಿದಷ್ಟು ಇಂಧನವು ನಮಗೆ ದೊರೆಯುವುದಿಲ್ಲ. ಆದ್ದರಿಂದಲೇ ಇಂಧನ ತುಂಬುವ ಸಮಯದಲ್ಲಿ ಯಾರು ಯಾವ ರೀತಿಯಲ್ಲಿ ಅಡಚಣೆ ಮಾಡಿದರೂ ನಮ್ಮ ದೃಷ್ಟಿಯನ್ನು ಬದಲಾಯಿಸದೇ ರೀಡಿಂಗ್ ಅನ್ನೇ ಗಮನಿಸುತ್ತಿರಬೇಕು.

2) ನಾವು ವಾಹನಗಳಿಂದ ಇಳಿಯದೇ ಇರುವುದು: ಕಾರುಗಳಂತಹ ಐಶಾರಾಮಿ ವಾಹನಗಳಿಗೆ ಹೊರ ಊರಿನಲ್ಲಿ ಇಂಧನ ತುಂಬಿಸುವಾಗ ನಾವು ವಾಹನದಿಂದ ಕೆಳಗಿಳಿಯುವುದಿಲ್ಲ. ಅದನ್ನೇ ಬಂಡವಾಳವನ್ನಾಗಿಸುವ ಕೆಲವು ಪೆಟ್ರೋಲ್ ಬಂಕ್ ನೌಕರರು ಸ್ವಲ್ಪ ಹೊತ್ತು ವಾಹನದ ಟ್ಯಾಂಕಿಗೆ ಇಂಧನ ತುಂಬಿಸಿ ನಾವು ಅವರನ್ನು ಗಮನಿಸುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿ ಅವರಲ್ಲಿರುವ ಕ್ಯಾನ್ ಗೆ ತುಂಬಿಸಿಕೊಳ್ಳುವ ಸಂಭವವಿದೆ.

Also Read  ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ದಿ.ಸುಷ್ಮಾ ಸ್ವರಾಜ್ ಪುತ್ರಿ..!

3) ದೊಡ್ಡದಾದ ಪೈಪುಗಳನ್ನು ಬಳಸುವುದು: ಸಾಮಾನ್ಯವಾಗಿ ಯಾವುದೇ ಪೆಟ್ರೋಲ್ ಬಂಕ್ ನಲ್ಲಾದರೂ ಇಂಧನ ತುಂಬುವ ಪೈಪುಗಳು ದೊಡ್ಡದಾಗಿರುತ್ತವೆ. ವಾಹನವು ಫ್ಯುಯಲ್ ಮೆಷಿನ್ ಗೆ ಹತ್ತಿರವಾಗಿದ್ದರೆ ಈ ಪೈಪುಗಳು ಬಾಗುತ್ತವೆ. ಆಗ ಸ್ವಲ್ಪ ಇಂಧನವು ಆ ಪೈಪಿನಲ್ಲಿಯೇ ಉಳಿದುಕೊಂಡು ನಾವು ಹಾಕಿಸಿದಷ್ಟು ಇಂಧನ ನಮಗೆ ಸಿಗುವುದಿಲ್ಲ. ಆದ್ದರಿಂದ ವಾಹನವನ್ನು ಮೆಷಿನ್ ಗೆ ಸ್ವಲ್ಪ ದೂರದಲ್ಲಿ ನಿಲ್ಲಿಸಬೇಕು. ಆಗ ಪೈಪು ನೇರವಾಗಿ ನಿಲ್ಲುವುದರಿಂದ ಅದರಲ್ಲಿ ಇಂಧನ ಉಳಿಯಲು ಅವಕಾಶವಿರುವುದಿಲ್ಲ.

4) ಪದೇ ಪದೇ ನಾಝಲ್ ಅನ್ನು ಒತ್ತುವುದು: ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬುವ ಸಮಯದಲ್ಲಿ ಕೆಲಸದವರು ಪದೇ ಪದೇ ನಾಜಲ್ ಅನ್ನು ಒತ್ತುತ್ತಿರುತ್ತಾರೆ. ನಮ್ಮ ದೃಷ್ಟಿಯು ರೀಡಿಂಗ್ ಮೇಲೆ ಇರುವುದರಿಂದ ಇದನ್ನು ನಾವು ಗಮನಿಸುವುದಿಲ್ಲ. ನಾಜಲ್ ಒತ್ತಿದ್ದಾಗ ನಮಗೆ ಇಂಧನ ಕಡಿಮೆ ಬರುತ್ತದೆ. ದ್ವಿಚಕ್ರ ವಾಹನಗಳಲ್ಲದೆ ಕಾರಿನಂತಹ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು ವಾಹನದಿಂದ ಕೆಳಗಿಳಿಯದೆ ಇಂಧನ ತುಂಬಿಸಿಕೊಳ್ಳುತ್ತಾರೆ. ಇದರಿಂದ ಇಂಧನ ತುಂಬುವವರಿಗೆ ಇನ್ನೂ ಹೆಚ್ಚಿನ ಇಂಧನವನ್ನು ಉಳಿಸಿಕೊಳ್ಳುವ ಅವಕಾಶವಿರುತ್ತದೆ. ಆದ್ದರಿಂದಲೇ ವಾಹನದಿಂದ ಕೆಳಗಿಳಿದು ರೀಡಿಂಗ್ ಹಾಗೂ ನಾಜಲ್ ಅನ್ನು ಗಮನಿಸುತ್ತಿರಬೇಕು.

Also Read  ಮತ್ತೆ ಇನ್ಸ್ಟಾಗ್ರಾಮ್ ಸರ್ವರ್ ಡೌನ್

5) ಮೆಷಿನ್ ಗಳನ್ನು ಟ್ಯಾಂಪರ್ ಮಾಡುವುದು:
ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ಮೆಷಿನ್ ಗಳಿಗೆ ಟ್ಯಾಂಪರ್ ಹಾಕುತ್ತಾರೆ. ಇದರಿಂದ ನಮಗೆ ಬರಬೇಕಾದಷ್ಟು ಇಂಧನ ಬರದೇ ಪರಿಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ತಿಳಿದುಕೊಳ್ಳಲು…ನೀವು ಇಂಧನ ತುಂಬಿಸಿದಾಗ ಕಡಿಮೆ ಇದೆ ಎಂದು ಅನುಮಾನ ಬಂದಲ್ಲಿ ಅದೇ ಬಂಕ್ ಗೆ ಹೋಗಿ ಪರೀಕ್ಷಿಸಿಕೊಳ್ಳಬಹುದು. ಅದಕ್ಕೆಂದೇ 5 ಲೀ. ಕ್ಯಾನ್ ಗಳು ದೊರೆಯುತ್ತವೆ. ಅವುಗಳಲ್ಲಿ ಇಂಧನ ತುಂಬಿಸಿ ಎಷ್ಟು ಬರುತ್ತದೆ ಎಂದು ಗಮನಿಸಿ ಕಡಿಮೆ ಇದ್ದಲ್ಲಿ ಆ ಬಂಕ್ ನ ಮೇಲೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಅಷ್ಟೇ ಅಲ್ಲದೆ, ಇಂಧನದ ಗುಣಮಟ್ಟ ಕಳಪೆಯಾಗಿದ್ದರೂ ಅದೇ ಬಂಕ್ ನಲ್ಲಿ ಲಭ್ಯವಿರುವ ಫಿಲ್ಟರ್ ಪೇಪರ್ ಟೆಸ್ಟರ್ ಅನ್ನು ಕೇಳಿ ಪರೀಕ್ಷಿಸಿಕೊಳ್ಳಬಹುದು. ಎಲ್ಲಾ ಬಂಕ್ ಗಳಲ್ಲೂ ಈ 2 ಟೆಸ್ಟ್ ಗಳನ್ನು ಉಚಿತವಾಗಿ ಮಾಡುತ್ತಾರೆ. ಅದರಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

error: Content is protected !!