ಕೇಪು ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಡಿ.20. ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಪೂರ್ವಭಾವಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಊರವರಿಗೆ ಆಯೋಜಿಸಲಾಗಿದ್ದ  ಕ್ರೀಡಾಕೂಟವು ಇತ್ತೀಚೆಗೆ ಶಾಲಾ ಮೈದಾನದಲ್ಲಿ ಜರಗಿತು.

ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಗ್ರಾಮದ ಎಲ್ಲರೂ ಸೇರಿಕೊಂಡು ಕಾರ್ಯಕ್ರಮಗಳನ್ನು ನಡೆಸಿದಾಗ ಗ್ರಾಮದೊಳಿಗನ ಬಾಂಧವ್ಯವೂ ವೃದ್ಧಿಸುತ್ತದೆ ಎಂದರು. ಕ್ರೀಡಾಕೂಟಕ್ಕೆ  ತೆಂಗಿನಕಾಯಿ ಒಡೆದು ಚಾಲನೆ ನೀಡಿ ಮಾತನಾಡಿದ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಊರಿನ ಎಲ್ಲರೂ ಸೇರಿಕೊಂಡು ಸಾರ್ವಜನಿಕವಾಗಿ ನಡೆಸುವ ಕಾರ್ಯಕ್ರಮಗಳಿಂದ ವಿವಿಧ ವರ್ಗದ ಜನರ ನಡುವೆ ಸೌಹಾರ್ದತೆ ಮತ್ತು ಅನ್ಯೋನ್ಯತೆ ನೆಲೆಸಲು ಸಾಧ್ಯ. ಊರಿನ ಶಾಲೆ ಅಭಿವೃದ್ಧಿಯಾಗಬೇಕಾದರೆ ಊರವರ ಸಹಕಾರ ಅತ್ಯಗತ್ಯ. ವಿದ್ಯಾರ್ಥಿಗಳ ಹೆತ್ತವರು ಶಾಲೆಯೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಶಾಲೆಯ ಅಭಿವೃದ್ಧಿಯಲ್ಲಿ ಸಹಕರಿಸಬೇಕು ಎಂದು ಅವರು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಲಲಿತಾ ಸೀತಾರಾಮ ರಾವ್ ಪುತ್ರಬೈಲು ಅವರು ಶಾಲೆಗಳಲ್ಲಿ ಕಲಿಕೆ ಎನ್ನುವುದು ಕೇವಲ ತರಗತಿ ಕೊಠಡಿಗೆ ಮಾತ್ರ ಸೀಮಿತವಾಗಬಾರದು. ಕೇವಲ ಅಂಕ ಗಳಿಕೆಯಿಂದ ಮಾತ್ರ ಜೀವನವನ್ನು ಸಮರ್ಥವಾಗಿ ಎದುರಿಸುವುದು  ಸಾಧ್ಯವಿಲ್ಲ. ಆದುದರಿಂದ ಶಿಕ್ಷಣ ಪರಿಪೂರ್ಣವಾಗಬೇಕಾದರೆ ಮಕ್ಕಳ ಪ್ರತಿಭೆಯನ್ನು  ಹೊರತೆಗೆಯುವ ಪಠ್ಯಪೂರಕ ಚಟುವಟಿಕೆಗಳಿಗೂ ಶಿಕ್ಷಣದಲ್ಲಿ ಅವಕಾಶಗಳು ಸಿಗಬೇಕು. ಹಾಗಾದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರಲು ಸಾಧ್ಯ ಎಂದರು.

Also Read  ಉಬರಡ್ಕ: ರಸ್ತೆ ಬಿಟ್ಟು ಮನೆಯ ಛಾವಣಿಗೆ ಹತ್ತಿದ ಕಾರು ► ಸುಬ್ರಹ್ಮಣ್ಯ ಎಸ್ಐ ಗೋಪಾಲ್ ರವರಿಗೆ ಗಾಯ

ಕಡಬ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಕೋಡಿಬೈಲು ಶುಭ ಹಾರೈಸಿದರು. ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಗ್ರಾ.ಪಂ.ಸದಸ್ಯರಾದ ಜಾನಕಿ, ಯಶೋದಾ ಪೂವಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಗೌಡ, ನಿಕಟಪೂರ್ವ ಅಧ್ಯಕ್ಷೆ ಮೋಹಿನಿ ಬೈದ್ರಿಜಾಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ ಕೊಡೆಂಕಿರಿ, ಜೇಸಿಐ ಕಡಬ ಕದಂಬ ಘಟಕದ ಪೂರ್ವಾಧ್ಯಕ್ಷ ಜಯರಾಮ ಗೌಡ ಆರ್ತಿಲ ಮುಂತಾದವರು ಉಪಸ್ಥಿತರಿದ್ದರು.

Also Read  ಎಸ್ ವೈಎಸ್ ಸೂರಿಕುಮೇರು ವತಿಯಿಂದ ಜಲಾಲಿಯ್ಯ ರಾತೀಬ್ ಮಜ್ಲಿಸ್ ➤ ದೀನ್ ವಿರೋಧಿಸಿದ್ದನ್ನು ವಿರೋಧಿಸಲು ಸಾಧ್ಯವಾಗಬೇಕು- ಇಸ್ಹಾಕ್ ಫೈಝಿ ಉಚ್ಚಿಲ

ಮುಖ್ಯಶಿಕ್ಷಕ ಹರಿಪ್ರಸಾದ ಉಪಾಧ್ಯಾಯ ಸ್ವಾಗತಿಸಿ, ಶಿಕ್ಷಕ ದಾಮೋದರ ಕೆ. ನಿರೂಪಿಸಿದರು. ಗ್ರಾ.ಪಂ.ಸದಸ್ಯ ಶಿವಪ್ರಸಾದ್ ರೈ ಮೇಲೇರಿ ವಂದಿಸಿದರು. ಶಿಕ್ಷಕಿಯರಾದ ಗೀತಾಕುಮಾರಿ ಮೇಲಿನಮನೆ ಹಾಗೂ ಮಿನಿ ವರ್ಗೀಸ್ ಸಹಕರಿಸಿದರು.

error: Content is protected !!
Scroll to Top