(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.30. ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆ ಡಿಸ್‌ಚಾರ್ಜ್ ಆಗಿ ಮನೆಗೆ ಬಂದಿದ್ದರು. ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ಕೆ.ವಿ. ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕ. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು. ಇವರು ಪತ್ನಿ ಹಾಗು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.