(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.27. ಮಹಾರಾಷ್ಟ್ರದಲ್ಲಿ ಜಾರಿಯಿರುವ ಅರ್ಹತಾ ಮಾನದಂಡವನ್ನೇ ಪರಿಗಣಿಸಿ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಚೀನಾದ ವಿಶ್ವವಿದ್ಯಾಲಯವೊಂದರಿಂದ ಎಂಬಿಬಿಎಸ್ ಪದವಿ ಪಡೆದ ಬೀದರ್ ಮಹಿಳೆಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ವೈದ್ಯಾಧಿಕಾರಿ ನೇಮಕಾತಿಗೆ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೀದರ್ ಜಿಲ್ಲೆಯ ಬಸವಕಲ್ಯಾಣ ನಿವಾಸಿ ಡಾ.ಸತ್ಯಕ್ಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಆರ್. ಹೆಗ್ಡೆ ಅವರ ನ್ಯಾಯಪೀಠ, ವೈದ್ಯಾಧಿಕಾರಿ ಹುದ್ದೆಗೆ ಭಾರತದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂಬುದಾಗಿ ಅರ್ಹತಾ ಮಾನದಂಡದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ, ವಿದೇಶಿ ವಿವಿಯ ಪದವಿಯನ್ನು ನೆರೆಯ ಮಹಾರಾಷ್ಟ್ರ ರಾಜ್ಯವು ಪರಿಗಣಿಸಿರುವ ಮಾತ್ರಕ್ಕೆ ಚೀನಾ ದೇಶದ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರುವ ಅರ್ಜಿದಾರೆಯನ್ನು ಕರ್ನಾಟಕದಲ್ಲಿನ ವೈದ್ಯಾಧಿಕಾರಿ ಹುದ್ದೆಗೆ ಗಣನೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರದ ಕ್ರಮ ತಪ್ಪು ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.