(ನ್ಯೂಸ್ ಕಡಬ)newskadaba.com ನವದೆಹಲಿ, ಜ.24. ತನ್ನ ಗರ್ಭವನ್ನು ಮುಂದುವರೆಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಮಹಿಳೆಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಭ್ರೂಣಕ್ಕೆ ತೀವ್ರವಾದ ಸಮಸ್ಯೆಗಳು ಇರುವುದರಿಂದ ವಿವಾಹಿತ ಮಹಿಳೆಗೆ 32ನೇ ವಾರದಲ್ಲಿ ಗರ್ಭಪಾತ ಮಾಡಿಕೊಳ್ಳಲು ಕೋರ್ಟ್ ಅನುಮತಿ ನೀಡಿದೆ. ಗರ್ಭದಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೌತಮ್ ಪಟೇಲ್ ಮತ್ತು ನ್ಯಾಯಮೂರ್ತಿ ಎಸ್.ಜಿ. ದಿಗೆ ಅವರಿದ್ದ ಪೀಠ, ಭ್ರೂಣಕ್ಕೆ ತೀವ್ರ ಆರೋಗ್ಯ ಸಮಸ್ಯೆಗಳಿದ್ದಾಗ ಗರ್ಭಪಾತಕ್ಕೆ ನಿಗದಿಪಡಿಸಿರುವ ಅವಧಿಯನ್ನು ಪರಿಗಣಿಸಬಾರದು ಎಂದು ಹೇಳಿತು.
‘ಗರ್ಭಪಾತ ಮಾಡಿಸಿಕೊಳ್ಳಬೇಕು ಎಂಬುದು ಮಹಿಳೆ ತಾನಾಗಿಯೇ ತೆಗೆದುಕೊಂಡಿರುವ ನಿರ್ಧಾರ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧರಿಸುವ ಹಕ್ಕು ಮಹಿಳೆಗಿದೆಯೇ ಹೊರತು ವೈದ್ಯಕೀಯ ಸಂಸ್ಥೆಗಲ್ಲ. ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಬೆಳೆಸುವುದು ತಾಯಿಗೆ ಜೀವನ ಪೂರ್ತಿ ಕಷ್ಟವಾಗುತ್ತದೆ. ಹಾಗಾಗಿ ಈ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಸರ್ಕಾರದ ನಿಯಮದ ಪ್ರಕಾರ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಬೇಕು.