(ನ್ಯೂಸ್ ಕಡಬ)newskadaba.com ಮಂಡ್ಯ, ಜ.23. ಅಡುಗೆ ಅನಿಲದ ಸಿಲಿಂಡರ್ ಪಡೆಯುವ ಮುನ್ನ ಗ್ರಾಹಕರು ಪ್ರಾಥಮಿಕವಾಗಿ ಸೀಲ್ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ ಎಂದು ಅನಿಲ ಸರಬರಾಜು ಕಂಪನಿ, ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ. ಆದರೆ, ಗ್ರಾಹಕರಲ್ಲಿ ಅರಿವಿನ ಕೊರತೆಯಿಂದಾಗಿ ಸಿಲಿಂಡರ್‌ಗಳನ್ನು ನೇರವಾಗಿ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.
ಅದೃಷ್ಟವಶಾತ್ ಜಿಲ್ಲೆಯಲ್ಲಿ ಈಚೆಗೆ ಗಂಭೀರವಾದ ಯಾವುದೇ ಅಡುಗೆ ಅನಿಲ ದುರಂತಗಳು ನಡೆದಿಲ್ಲ. ಆದರೆ, ಸಣ್ಣಪುಟ್ಟ ಅನಿಲ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಅದಕ್ಕೆ ಗ್ರಾಹಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ. ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಅಡುಗೆ ಅನಿಲ ಬಳಸುತ್ತಿದ್ದು ಅವಶ್ಯವಾಗಿ ಸುರಕ್ಷತಾ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ.
ಏಜೆನ್ಸಿಯಿಂದ ಸಿಲಿಂಡರ್ ಬಂದಾಗ ಅದರ ಪ್ರಾಥಮಿಕ ಪರೀಕ್ಷೆ ನಡೆಯಬೇಕು. ಸರಬರಾಜು ಮಾಡುವ ಸಿಬ್ಬಂದಿಗೆ ಸೀಲ್ ತೆರೆಯುವ ತರಬೇತಿ ಇರುತ್ತದೆ. ಗ್ರಾಕಹರು ವಿತರಕನಿಗೆ ಸೀಲ್ ತೆಗೆದು ಪರೀಕ್ಷೆ ಮಾಡುವಂತೆ ತಿಳಿಸಬೇಕು. ಈ ವಿಚಾರದಲ್ಲಿ ಹಿಂದೇಟು ಹಾಕಬಾರದು. ಪರೀಕ್ಷೆ ನಡೆದರೆ ಶೇ 60ರಷ್ಟ ಅನಿಲ ದುರಂತಗಳನ್ನು ತಡೆಯಬಹುದು ಎಂದು ಏಜೆನ್ಸಿಯವರು ಹೇಳುತ್ತಾರೆ.