ಕನ್ನಡದ ಖ್ಯಾತ ಖಳನಟ ಲಕ್ಷ್ಮಣ್ ವಿಧಿವಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಹಿರಿಯ ನಟ ಲಕ್ಷ್ಮಣ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರಿಗೆ 74 ವರ್ಷವಾಗಿತ್ತು. ಲಕ್ಷ್ಮಣ್ ಅವರು ಅಂಬರೀಶ್ ಅವರ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ ಎಂದು ತಿಳಿದುಬಂದಿದೆ.

ಲಕ್ಷ್ಮಣ್ ಅವರು ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ವೃತ್ತಿ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಬಣ್ಣ ಹಚ್ಚಿದ್ದರು. ‘ಒಲವಿನ ಉಡುಗೊರೆ’, ‘ಸಾಂಗ್ಲಿಯಾನ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಅಂಬರೀಷ್​, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಆರಂಭದಲ್ಲಿ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮಣ್ ನಂತರ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಇನ್ನೂ ನಟ ಲಕ್ಷ್ಮಣ್ ನಿಧನಕ್ಕೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.

Also Read  ರೇಷನ್ ಕಾರ್ಡ್ - ಇ ಕೆವೈಸಿ ಪ್ರಕ್ರಿಯೆ ವಿಸ್ತರಣೆ

error: Content is protected !!
Scroll to Top