(ನ್ಯೂಸ್ ಕಡಬ)newskadaba.com ನವದೆಹಲಿ, ಜ.20. ಲೆಫ್ಟಿನೆಂಟ್ ಕರ್ನಲ್‌ಗಳಾಗಿದ್ದ ಭಾರತೀಯ ಸೇನೆಯ 108 ಮಂದಿ ಮಹಿಳಾ ಯೋಧರು ಕರ್ನಲ್ ಆಗಿ ಬಡ್ತಿ ಪಡೆದುಕೊಳ್ಳಲಿದ್ದಾರೆ. ಆ ಮೂಲಕ ಅವರೆಲ್ಲರೂ ತಂಡ ಮುನ್ನಡೆಸುವ ಜವಾಬ್ದಾರಿ ಪಡೆದುಕೊಳ್ಳಲಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಸೇವೆಯಲ್ಲಿರುವ ಮಹಿಳೆಯರಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, 1992ರಿಂದ 2006ನೇ ಬ್ಯಾಚ್‌ನ ಒಟ್ಟು 108 ಮಂದಿ ಮಹಿಳೆಯರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಲಿದ್ದಾರೆ. ಆ ಮೂಲಕ ತಮ್ಮ ತಂಡಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರು ಪಡೆದುಕೊಳ್ಳಲಿದ್ದಾರೆ.
ಎಂಜಿನಿಯರ್‍ಸ್, ಸಿಗ್ನಲ್‌ಗಳು, ಆರ್ಮಿ ಏರ್ ಡಿಫೆನ್ಸ್, ಇಂಟೆಲಿಜೆನ್ಸ್ ಕಾರ್ಪ್ಸ್, ಆರ್ಮಿ ಸರ್ವಿಸ್ ಕಾರ್ಪ್ಸ್, ಆರ್ಮಿ ಆರ್ಡನೆನ್ಸ್ ಕಾರ್ಪ್ಸ್, ಎಲೆಕ್ಟ್ರಿಕಲ್ ಆಂಡ್ ಮೆಕಾನಿಕಲ್ ಎಂಜಿನಿಯರ್‍ಸ್ ಸೇರಿದಂತೆ ಸೇನೆಯ ವಿವಿಧ ಶಸ್ತಾಸ್ತ್ರ ಮತ್ತು ಸೇವೆಗಳಲ್ಲಿರುವವರಿಗೆ ಬಡ್ತಿ ಪ್ರಕ್ರಿಯೆ ನಡೆಯುತ್ತಿದೆ. ಮೂರು ಹಂತದಲ್ಲಿ ಬಡ್ತಿ ಅವಕಾಶವಿದ್ದು, ಶೀಘ್ರ ಬಡ್ತಿ ಪಡೆದವರಿಗೆ ಮಾಹಿತಿ ನೀಡಲಾಗುತ್ತದೆ. 80 ಅಧಿಕಾರಿಗಳಿಗೆ ಈಗಾಗಲೇ ಬಡ್ತಿ ನೀಡಲಾಗಿದೆ ಎಂದು ಸೇನೆ ತಿಳಿಸಿರುವುದಾಗಿ ವರದಿಯಾಗಿದೆ.