(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜ.20. ದೇಶದಲ್ಲಿ ಗೋಧಿ ಹಾಗೂ ಗೋಧಿಹಿಟ್ಟಿನ ಚಿಲ್ಲರೆ ಮಾರಾಟ ದರ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕೇಂದ್ರ ಸರಕಾರ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದೆ.
ಸದ್ಯದ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ದರ ಪ್ರತಿ ಕೆ.ಜಿಗೆ 38 ರೂ. ಮೀರಿರುವ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಸರಬರಾಜು ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದು, “ಈ ವಿಚಾರ ಕೇಂದ್ರ ಸರಕಾರದ ಗಮನದಲ್ಲಿದೆ. ಕೇಂದ್ರ ಆಹಾರ ನಿಗಮದ ಗೋದಾಮುಗಳಲ್ಲಿ ಗೋಧಿಸಂಗ್ರಹ ಸಾಕಷ್ಟಿದೆ. ಆದರೂ ಬೆಲೆ ಏರಿಕೆ ಆಗಿದ್ದು, ಇದರ ಮೇಲೆ ಸತತ ನಿಗಾ ಇಟ್ಟಿದ್ದೇವೆ. ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ,” ಎಂದಿದ್ದಾರೆ. ಆದರೆ ದರ ಇಳಿಕೆಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.