(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.20. ಈ ಬಾರಿ ಕರ್ನಾಟಕದಲ್ಲಿ ಚುನಾವಣೆ ವರ್ಷ. ಇನ್ನೇನು ಕೆಲ ದಿನಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ, ಸಾಮಾನ್ಯ ಜನರ ನಿರೀಕ್ಷೆ, ಕುತೂಹಲ ಬಜೆಟ್ ಮೇಲೆ ಹೆಚ್ಚಾಗಿದೆ. ರಾಜ್ಯ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಜನವರಿ 23 ಸೋಮವಾರದಿಂದ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ.
ಬಜೆಟ್ ಪೂರ್ವಭಾವಿ ಸಭೆ: ಎಲ್ಲಾ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ನಾಡಿದ್ದು 23ರಿಂದ 3 ದಿನ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿದ್ದು 30ಕ್ಕೂ ಹೆಚ್ಚು ಇಲಾಖೆಗಳ ಜೊತೆ ಚರ್ಚಿಸಿ ಫೆಬ್ರವರಿ 17ರಂದು ಬಜೆಟ್ ಮಂಡಿಸಲು ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇಲಾಖೆಗಳೊಂದಿಗೆ ಸಿಎಂ ಸಭೆ: ಸಭೆಗೆ ನಿಗದಿತ ದಿನ ಹಾಗೂ ಸಮಯದಲ್ಲಿ ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಅವಶ್ಯಕ ಮಾಹಿತಿಗಳು ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ಹಾಜರಾಗಲು ಆರ್ಥಿಕ ಇಲಾಖೆ ಸೂಚಿಸಿದೆ.