➤ 5,000 ಕಾಯಂ ಹುದ್ದೆ ನೇಮಕಕ್ಕೆ ಪ್ರಸ್ತಾವನೆ ಅತಿಥಿ ಉಪನ್ಯಾಸಕರ ಸಂಖ್ಯೆಯೂ ಹೆಚ್ಚಳ ➤ ಸಚಿವ ಅಶ್ವತ್ಥನಾರಾಯಣ!

ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 20. ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಹೊಸದಾಗಿ 5 ಸಾವಿರ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿಥಿ ಉಪನ್ಯಾಸಕರ ಸಂಖ್ಯೆ ಕೂಡ ಹೆಚ್ಚಳ ಮಾಡುವುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಚಿತ ತರಬೇತಿ/ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ‘ಸ್ಪರ್ಧಾ ಅರಿವು’ ನಿಯತಕಾಲಿಕೆ ಗುರುವಾರ ಒಡಂಬಡಿಕೆ ಮಾಡಿಕೊಂಡವು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮತ್ತು ‘ಸ್ಪರ್ಧಾ ಅರಿವು’ ಸಿಇಒ ಸತೀಶ ಗೌಡ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕೇಂದ್ರ ಸರಕಾರಿ ಸೇವೆಗಳಿಗೆ ನಮ್ಮ ಕರ್ನಾಟಕದಿಂದ ನೇಮಕವಾಗುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು’ ಎಂದರು.

Also Read  ➤2023 ಬಜೆಟ್ ಗೂ ಮುನ್ನವೇ ಕಾರುಗಳ ಬೆಲೆ ಹೆಚ್ಚಳ

ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ಸಿ) ಮೂಲಕ ಸದ್ಯದಲ್ಲೇ 30 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಹಾಗೂ ಯುಪಿಎಸ್ಸಿ ನಡೆಸುವ ನೇಮಕಾತಿಗಳಿಗೆ ನಮ್ಮ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕೆಂಬುದು ಈ ಒಡಂಬಡಿಕೆಯ ಉದ್ದೇಶ ಎಂದು ಅವರು ವಿವರಿಸಿದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ ಐದು ಸಾವಿರ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಇದರ ಜೊತೆಗೆ ಇನ್ನೂ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಸರ್ಕಾರಿ ಕಾಲೇಜುಗಳಲ್ಲಿನ ಪ್ರವೇಶಾತಿ ಸಂಖ್ಯೆಯನ್ನು ಈಗಿರುವ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಬೇಕು ಎಂದು ಹೇಳಿದರು.

error: Content is protected !!
Scroll to Top