(ನ್ಯೂಸ್ ಕಡಬ) newskadaba.com ಕಡಬ, ಡಿ.16. ಸದಸ್ಯರೋರ್ವರ ನಿಧನದಿಂದ ತೆರವಾಗಿರುವ ಕೊೖಲ ಗ್ರಾ.ಪಂ.ನ 4ನೇ ವಾರ್ಡ್ನ 1 ಸ್ಥಾನಕ್ಕೆ ಡಿ.17ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ನಡೆಯುತ್ತಿರುವ ಈ ಉಪಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿವೆ. ಗ್ರಾ.ಪಂ.ನಲ್ಲಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದ್ದು, ಸದಸ್ಯ ಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು ಎರಡೂ ಪಕ್ಷಗಳು ಮತದಾರರ ಮನವೊಲಿಕೆ ನಡೆಸುತ್ತಿವೆ.
ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದ್ದ 4ನೇ ವಾರ್ಡ್ನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ಬೆಂಬಲಿತ ಸದಸ್ಯ ನಾಗೇಶ್ ಕುಂಬಾರ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಳಕಡಮ ನಿವಾಸಿ ಪುವ ಕುಂಬಾರರವರ ಪುತ್ರ ಲಿಂಗಪ್ಪ ಕುಂಬಾರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಳಕಡಮ ನಿವಾಸಿ ನಾಣ್ಯಪ್ಪ ಪುಜಾರಿಯವರ ಪುತ್ರ ದಯಾನಂದ ಸಾಲಿಯಾನ್ರವರು ಕಣದಲ್ಲಿದ್ದಾರೆ. ಉಭಯ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ವಾರ್ಡ್ನ ಮನೆ ಮನೆಗೆ ಭೇಟಿ ನೀಡಿ ಮತದಾರರ ಮನವೊಲಿಕೆ ಕಸರತ್ತು ನಡೆಸಿದ್ದು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಭಾನುವಾರದಂದು ವಳಕಡಮ ಕಿ.ಪ್ರಾ.ಶಾಲೆಯಲ್ಲಿ ಉಪಚುನಾವಣೆ ನಡೆಯಲಿದ್ದು ದ.20ರಂದು ಪುತ್ತೂರು ತಹಶೀಲ್ದಾರ್ ಕಚೇರಿಯಲ್ಲಿ ಮತಪತ್ರಗಳ ಎಣಿಕೆ ನಡೆಯಲಿದೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದು, ರಾಮಕುಂಜ ಗ್ರಾ.ಪಂ.ಪಿಡಿಒ ರವಿಚಂದ್ರರವರು ಉಪ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ:
15 ಸದಸ್ಯ ಬಲದ ಕೊೖಲ ಗ್ರಾ.ಪಂ.ನಲ್ಲಿ 9 ಬಿಜೆಪಿ, 5 ಕಾಂಗ್ರೆಸ್ ಹಾಗೂ 1 ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯ ನಾಗೇಶ್ ಕುಂಬಾರ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಬಲ 8ಕ್ಕೆ ಕುಸಿದಿದೆ. ಇದೀಗ ಈ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ನಡೆಸಿದ್ದು ತಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ಪರ ಶಾಸಕ ಎಸ್.ಅಂಗಾರ, ಜಿ.ಪಂ.ಮಾಜಿ ಅಧ್ಯಕೆ, ಹಾಲಿ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ತಾ.ಪಂ.ಸದಸ್ಯೆಯರಾದ ಜಯಂತಿ ಆರ್.ಗೌಡ, ತೇಜಸ್ವಿನಿ ಶೇಖರ ಗೌಡ. ತಾ.ಪಂ.ಮಾಜಿ ಸದಸ್ಯ ಧರ್ಮಪಾಲ ರಾವ್, ಎಪಿಎಂಸಿ ಮಾಜಿ ನಿರ್ದೇಶಕ ಶೀನಪ್ಪ ಗೌಡ ವಳಕಡಮ, ಕೊೖಲ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಸೇರಿದಂತೆ ಹಾಲಿ,ಮಾಜಿ ಸದಸ್ಯರುಗಳು ಮತದಾರರ ಮನೆ ಮನೆ ಭೇಟಿ ನೀಡಿ ಮತಯಾಚಿಸಿದ್ದಾರೆ.

ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು:
ಕೊೖಲ ಗ್ರಾ.ಪಂ.ನಲ್ಲಿ ಈಗಾಗಲೇ 5 ಸದಸ್ಯ ಬಲಹೊಂದಿರುವ ಕಾಂಗ್ರೆಸ್ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಗೆಲುವು ಸಾಧಿಸುವ ಮೂಲಕ ಸದಸ್ಯ ಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮತದಾರರ ಮನವೊಲಿಕೆ ಕಾರ್ಯ ನಡೆಸುತ್ತಿದ್ದು ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಕೆಪಿಸಿಸಿ ಸದಸ್ಯ ಡಾ.ರಘು, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕೊೖಲ ಗ್ರಾ.ಪಂ. ಸದಸ್ಯರುಗಳಾದ ಕೆ.ಎ. ಸುಲೈಮಾನ್, ನಝೀರ್ ಪುರಿಂಗ ಸೇರಿದಂತೆ ಪಕ್ಷದ ಹಲವು ಮುಖಂಡರು ಮತದಾರರ ಮನೆ ಮನೆ ಭೇಟಿ ನೀಡಿ ಮತಯಾಚಿಸಿದ್ದಾರೆ.

ಕೊೖಲ ಗ್ರಾ.ಪಂ.ನ 4ನೇ ವಾರ್ಡ್ನಲ್ಲಿ 1184 ಮತದಾರರಿದ್ದಾರೆ. ಈ ಪೈಕಿ 621 ಪುರುಷ ಹಾಗೂ 563 ಮಹಿಳಾ ಮತದಾರರಿದ್ದಾರೆ. ಕೊೖಲ ಗ್ರಾಮದ ವಳಕಡಮ ಕಿ.ಪ್ರಾ.ಶಾಲೆಯಲ್ಲಿ ದ.17ರಂದು ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ದ.20ರಂದು ಪುತ್ತೂರು ತಹಶೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದು, ರಾಮಕುಂಜ ಗ್ರಾ.ಪಂ.ಪಿಡಿಒ ರವಿಚಂದ್ರರವರು ಉಪ ಚುನಾವಣಾಧಿಕಾರಿಯಾಗಿದ್ದಾರೆ.
