ಕಡಬ: ದನಗಳ ಮೇಲೆ ದಾಳಿ ಮಾಡಿದ ಚಿರತೆ – ಆತಂಕದಲ್ಲಿ ಐತ್ತೂರು ಗ್ರಾಮಸ್ಥರು

ಕಡಬ: ಮೇಯಲು ಬಿಟ್ಟಿದ್ದ ದನಗಳ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಜನವರಿ 10 ರಂದು ನಡೆದಿದೆ.

ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಜೆ ಅಂತಿಬೆಟ್ಟು ಪ್ರದೇಶದಲ್ಲಿ ಲಕ್ಷ್ಮಣ ಗೌಡ ಎಂಬರಿಗೆ ಸೇರಿದ ದನ ಮತ್ತು ಕರುವಿನ ಮೇಲೆ ದಾಳಿ ಮಾಡಿದ್ದು ಎರಡು ದನಗಳೂ ಗಂಭೀರ ಗಾಯಗೊಂಡಿದೆ. ಕಳೆದ ಎರಡು ತಿಂಗಳಿನಿಂದ ಸುಮಾರು 20 ಕ್ಕೂ ಹೆಚ್ಚು ದನಗಳ ಮೇಲೆ ದಾಳಿ ಮಾಡಿರುವುದಾಗಿ ಗ್ರಾಮದ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಮರಿ ಹೊಂದಿರುವ ಚಿರತೆ ದಾಳಿ ಮಾಡಿರುವುದಾಗಿ ಗ್ರಾಮದಲ್ಲಿ ಸುದ್ದಿ ಹಬ್ಬಿದ್ದು ಅರಣ್ಯ ಅಧಿಕಾರಿಗಳ ಪರಿಶೀಲನೆಯ ಬಳಿಕ ನಿಜ ಸಂಗತಿ ತಿಳಿಯಲಿದೆ.

ಚಿರತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಎರಡು ತಿಂಗಳ ಹಿಂದೆಯೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚಿರತೆ ಮತ್ತೆ ದಾಳಿ ಮಾಡಿದೆ,ಮನುಷ್ಯರ ಬಲಿ ಪಡೆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂಬುದಾಗಿ ಗ್ರಾಮದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಹಿತ ಪ್ರಕಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇದೇ ಭಾಗದಲ್ಲಿ ಕೆ ಎಫ್ ಡಿ ಸಿ ಗೆ ಸೇರಿದ ರಬ್ಬರ್ ಮರಗಳಿದ್ದು ರಬ್ಬರ್ ಟ್ಯಾಪಿಂಗ್ ಮಾಡಲು ಬರುವ ಕಾರ್ಮಿಕರು ಜೀವ ಭಯದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಇದೇ ಗ್ರಾಮದ ಕೋಕಲ ಎಂಬಲ್ಲಿ ರಾಘವ ಪೂಜಾರಿ ಎಂಬವರಿಗೆ ಸೇರಿದ ಆಡಿನ ಮೇಲೆ ಚಿರತೆಯೊಂದು ಏಕಾಏಕಿ ಪೊದೆಯಿಂದ ಹಾರಿ ದಾಳಿ‌ಮಾಡಿ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿತ್ತು.

Also Read  ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ➤ ವೇದವ್ಯಾಸ ಕಾಮತ್

ಬಗ್ಗೆ ಪ್ರತಿಕ್ರಿಯೆ ನೀಡಿದ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಘಟನೆ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top