(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಇಚಿಲಂಪಾಡಿಯ ಕಾಯರಡ್ಕ- ಪೆರಿಯಶಾಂತಿ ನಡುವಿನ ಎರಡು ಕಿಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ಕಾಮಗಾರಿಗೆ ಆಗ್ರಹಿಸಿ ಇಚಿಲಂಪಾಡಿಯ ನೀತಿ ತಂಡದ ವತಿಯಿಂದ ಡಿಸೆಂಬರ್ 14 ಗುರುವಾರದಂದು ಸಾರ್ವಜನಿಕ ಭಿಕ್ಷಾಟನೆ ನಡೆಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಟಿ. ತಿಳಿಸಿದ್ದಾರೆ.
ಈ ರಸ್ತೆಯ ಅವ್ಯವಸ್ಥೆ ಬಗ್ಗೆ ನೀತಿ ತಂಡವು ಸಾರ್ವಜನಿಕರ ಸಹಕಾರದೊಂದಿಗೆ 2017 ಮಾರ್ಚ್ 22 ರಂದು ಬೃಹತ್ ಪ್ರತಿಭಟನೆ ನಡೆಸಿದ್ದು, ಅಂದು ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೂರು ತಿಂಗಳಲ್ಲಿ ರಸ್ತೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ ಯಾವುದೇ ಕಾಮಗಾರಿ ನಡೆಯದೇ ಇದ್ದಾಗ ನೀತಿ ತಂಡವು ಮಾಹಿತಿ ಹಕ್ಕು ಕಾಯಿದೆಯ ಮೂಲಕ ಮಾಹಿತಿ ಪಡೆದಾಗ ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆಯ ಕೆಲಸ ಮಾಡಲು ಅನುದಾನ ಇಲ್ಲ ಎಂಬುದಾಗಿ ಮಾಹಿತಿ ಬಂದಿದೆ. ಇದರಿಂದ ನೊಂದ ನೀತಿ ತಂಡವು ಸಾರ್ವಜನಿಕರ ಸಹಕಾರದಲ್ಲಿ ಡಿಸೆಂಬರ್ 14 ನೇ ತಾರೀಕಿಗೆ ಭಿಕ್ಷಾಟನೆ ಮಾಡಿ ಬರುವ ಹಣವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಲು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿ ಗಳಿಗೆ ನೀತಿ ತಂಡದ ವತಿಯಿಂದ ಮನವಿ ಪತ್ರವನ್ನು ನೀಡಲಾಗಿದೆ ಎಂದರು.
ಕರ್ನಾಟಕದ ಲೋಕೋಪಯೋಗಿ ಇಲಾಖೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಮತ್ತು ಧರ್ಮಸ್ಥಳ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಕಿಲೋಮೀಟರ್ ಸರಿಪಡಿಸಲು ಅನುದಾನವಿಲ್ಲ ಎನ್ನುವ ಮಾಹಿತಿ ಬಂದ ಕಾರಣಕ್ಕೆ ನಾವು ಸಾರ್ವಜನಿಕ ಭಿಕ್ಷಾಟನೆ ನಡೆಸಲಿದ್ದೇವೆ ಎಂದಿದ್ದಾರೆ.