(ನ್ಯೂಸ್ ಕಡಬ)newskadaba.com ನವದೆಹಲಿ, ಜ.10. ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ ತೀರ್ಪನ್ನು ಪ್ರಶ್ನಿಸಿ ಗೂಗಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದಕ್ಕೂ ಮುನ್ನ ಗೂಗಲ್, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಎನ್ಸಿಎಲ್ಎಟಿ ದಂಡದ ಶೇಕಡಾ 10ರಷ್ಟು ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿತ್ತು. ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಲ್ಫಾಬೆಟ್ ಇಂಕ್‌ನ ಗೂಗಲ್‌ಗೆ ಸ್ಪರ್ಧಾ ಆಯೋಗವು 2022ರ ಅಕ್ಟೋಬರ್ನಲ್ಲಿ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ವಿಧಿಸಿದ ಕ್ರಮಕ್ಕೆ ಗೂಗಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು ಎನ್ನಲಾಗಿದೆ.
ಗೂಗಲ್ ಕಂಪನಿಯು ಮೇಲ್ಮನವಿ ಸಲ್ಲಿಸಿರುವುದು ಸುಪ್ರೀಂ ಕೋರ್ಟ್ನ ದಾಖಲೆಗಳಿಂದ ತಿಳಿದುಬಂದಿದೆ. ಸಿಸಿಐ ತೀರ್ಪಿನಿಂದ ಬಚಾವಾಗಲು ಕೊನೆಯ ಪ್ರಯತ್ನವಾಗಿ ಗೂಗಲ್ ಕಾನೂನು ಸಮರದ ಮೊರೆ ಹೋಗಲಿದೆ ಎಂಬುದಾಗಿ ಇತ್ತೀಚೆಗೆ ವರದಿಯಾಗಿತ್ತು.