(ನ್ಯೂಸ್ ಕಡಬ) newskadaba.com ಕಾರವಾರ/ಶಿರಸಿ, ಡಿ.12. ಹಿಂದೂ ಕಾರ್ಯಕರ್ತನ ನಿಗೂಢ ಸಾವಿನಿಂದಾಗಿ ಕಳೆದ ಕೆಲ ದಿನಗಳಿಂದ ವಿಕೋಪಕ್ಕೆ ತಿರುಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮಂಗಳವಾರವೂ ಮುಂದುವರಿದಿದೆ.
ಸೋಮವಾರದಂದು ಹೊನ್ನಾವರದಲ್ಲಿ ನಡೆದಿದ್ದ ಹಿಂಸಾಕೃತ್ಯ ಮಂಗಳವಾರದಂದು ಶಿರಸಿಯಲ್ಲೂ ಮುಂದುವರಿದಿದ್ದು, ಬಂದ್ ಹಿನ್ನೆಲೆಯಲ್ಲಿ ಉದ್ರಿಕ್ತರು ಪೊಲೀಸ್ ವಾಹನಗಳಿಗೆ ಕಲ್ಲು ತೂರಾಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಿಂದೂ ಸಂಘಟನೆ ಪ್ರಮುಖರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಕಂಡ ಕಂಡ ಕಡೆ ಉದ್ರಿಕ್ತ ಗುಂಪುಗಳು ಕಲ್ಲು ತೂರಿವೆ. ಹೀಗಾಗಿ ಕೆಲ ಮಾಧ್ಯಮದವರನ್ನೂ ಒಳಗೊಂಡು ಪೊಲೀಸರೂ ಕಲ್ಲೇಟಿನಿಂದ ಗಾಯಗೊಂಡಿದ್ದಾರೆ. ಶಿರಸಿಯ ವಿವಿಧ ಭಾಗಗಳಲ್ಲಿ ಉದ್ರಿಕ್ತರ ಗುಂಪು ಟೈರ್‌ಗಳಿಗೆ ಬೆಂಕಿ ಹಚ್ಚಿದೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ ಲಾಠಿ ಬೀಸಿ ಗುಂಪು ಚದುರಿಸುತ್ತಿದ್ದಾರೆ.
ಮತ್ತೊಂದೆಡೆ ಮುಂಡಗೋಡ್‌ದಲ್ಲೂ ಬಂದ್ ಆಚರಿಸಲಾಗುತ್ತಿದೆ. ಭಟ್ಕಳದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.