(ನ್ಯೂಸ್ ಕಡಬ)newskadaba.com ಮೈಸೂರು, ಜ.10. ವ್ಯವಸ್ಥಿತ ಸೈಬರ್ ಕ್ರೈಂ ದಂಧೆಯೊಂದನ್ನು ಮೈಸೂರು ಪೊಲೀಸರು ಭೇದಿಸಿದ್ದು, ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೀಮಾ ಲಾಟ್ಕರ್ ಅವರು, ಕಳೆದ ವರ್ಷ ನಂಜನಗೂಡಿನ ಬದನವಾಳು ಗ್ರಾಮದ ಹಿಮಾ ಶ್ವೇತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಅರೋಪಿಗಳು ಇನ್ ಸ್ಟಾಗ್ರಾಂ ಮೂಲಕ, ವಾಟ್ಸಾಪ್ ಚಾಟಿಂಗ್ ಮೂಲಕ ಬೆಳೆ ಬಾಳುವ ಗಿಫ್ಟ್ ಕಳುಹಿಸುವುದಾಗಿ ನಂಬಿಸುತ್ತಿದ್ದರು. ನಂತರ ಲಕ್ಷಾಂತರ ಹಣ ಪಡೆದುಕೊಂಡು ವಂಚಿಸುತ್ತಿದ್ದರು. ಇದೇ ರೀತಿ ನಂಜನಗೂಡು ತಾಲೂಕು ಬದನವಾಳು ಗ್ರಾಮದ ಹಿಮ ಶ್ನೇತಾ ಎಂಬವವರಿಗೆ ರಾಬರ್ಟ್ ಎಡ್ಗರ್ ಎಂಬ ಹೆಸರಿನಲ್ಲಿ ಪರಿಚಿತನಾದ ಆರೋಪಿ, ತಾನು ಯುಕೆಯಲ್ಲಿದ್ದು, ಐಫೋನ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ನೀಡುತ್ತಿದ್ದು, ದೆಹಲಿ ವಿಮಾನ ನಿಲ್ದಾಣದಿಂದ ಕರೆ ಬಂದಾಗ ಅವರ ಖಾತೆಗೆ ಹಣ ಹಾಕಿ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ. ಬಳಿಕ ಆತ ಹೇಳಿದ ಖಾತೆಗೆ ವಿವಿಧ ದಿನಾಂಕಗಗಳಲ್ಲಿ ರೂ.4.77 ಲಕ್ಷ ಹಣವನ್ನು ಪಾವತಿಸಿದ್ದರೂ ಯಾವುದೇ ಗಿಫ್ಟ್ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವ ಬಗೆಗೆ ಕಳೆದ 2022ರ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರು ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ವರದಿಯಾಗಿದೆ.